`ಸಿಮ್ರನ್’ `…ಶಾದಿ’, `ಲಕ್ನೋ ಸೆಂಟ್ರಲ್’ ನಡುವೆ ಗೆಲುವು ಯಾರಿಗೆ…

ಇಂದು ಬಿಡುಗಡೆಯಾಗುತ್ತಿರುವ ಹಿಂದಿ ಚಿತ್ರಗಳಲ್ಲಿ `ಸಿಮ್ರನ್’, `ಪಟೇಲ್ ಕಿ ಪಂಜಾಬಿ ಶಾದಿ’, `ಲಕ್ನೋ ಸೆಂಟ್ರಲ್’ ಪ್ರಮುಖವಾಗಿವೆ.

`ಸಿಮ್ರನ್’ : ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಮೂರು ಬಾರಿ ರಾಷ್ಟ್ರಪ್ರಶಸ್ತಿ ವಿಜೇತೆ ಕಂಗನಾ ರನೌತ್. ಕಂಗನಾ ಈಗ ವೈಯಕ್ತಿಕ  ಕಾರಣಗಳಿಗಾಗಿ ಭಾರೀ ಸುದ್ದಿಯಲ್ಲಿದ್ದಾಳೆ. ಆದರೆ ಇದೆಲ್ಲ ಸಿನಿಮಾಗೆ ಯಾವ ರೀತಿಯಲ್ಲೂ ಪರಿಣಾಮವಾಗುವುದಿಲ್ಲ ಎನ್ನುತ್ತಾರೆ ನಿರ್ದೇಶಕ ಹನ್ಸಲ್ ಮೆಹ್ತಾ.

`ಸಿಮ್ರನ್’ ಒಂದು ಅಮೆರಿಕಾದಲ್ಲಿ ಕೆಲಸದ ಹುಡುಗಿಯಾಗಿರುವ ಗುಜರಾತೀ ಹೆಣ್ಣುಮಗಳೊಬ್ಬಳ ಕತೆಯಾಗಿದೆ. ಅಮೆರಿಕಾದಲ್ಲಿ ಆಕೆ ಮೋಜಿನ ಜೀವನಕ್ಕೆ ಬಲಿಬೀಳುತ್ತಾಳೆ. ಕುಡಿತ, ಜೂಜು ಕೂಡಾ ಆಕೆಯ ಜೀವನದ ಭಾಗವಾಗುತ್ತದೆ. ಹಣದ ಹಿಂದೆ ಬೀಳುವ ಈಕೆ ಅಪರಾಧೀಲೋಕಕ್ಕೂ ಕಾಲಿಡುತ್ತಾಳೆ. ಸಿನಿಮಾದಲ್ಲಿ ಬ್ಯಾಂಕ್ ದರೋಡೆ ಸಮೇತ ಕೆಲವು ಥ್ರಿಲ್ಲಿಂಗ್ ದೃಶ್ಯಗಳೂ ಇವೆ. ಜೊತೆಗೇ ಸಾಕಷ್ಟು ಕಾಮಿಡಿ ಸೀನುಗಳಿದ್ದು ಕಂಗನಾ ಈ ಚಿತ್ರದ ಮೂಲಕ ಇನ್ನೊಮ್ಮೆ ಬಾಲಿವುಡ್ `ಕ್ವೀನ್’ ಆಗುತ್ತಾಳೆ ಎನ್ನುವ ನಿರೀಕ್ಷೆ ಚಿತ್ರತಂಡಕ್ಕಿದೆ.

ಹನ್ಸಲ್ ಮೆಹ್ತಾ ಈ ಸಿನಿಮಾದ ನಿರ್ದೇಶಕರಾಗಿದ್ದು ಅಮೆರಿಕಾದ ಅಟ್ಲಾಂಟಾದಲ್ಲಿ ಸಿನಿಮಾದ ಬಹುತೇಕ ಭಾಗದ ಚಿತ್ರೀಕರಣವನ್ನು ಮಾಡಿದ್ದಾರೆ. ಚಿತ್ರದಲ್ಲಿಯ ಕೆಲವು ಹಾಡು ಕುಣಿತಗಳು ಈಗಾಗಲೇ ಸಿನಿಪ್ರೇಮಿಗಳ ಗಮನ ಸೆಳೆದಿದೆ. ಕಂಗನಾಗೆ ಈ ಸಿನಿಮಾದಲ್ಲಿ ಸೋಹಂ ಶಾ ಸಾಥ್ ನೀಡಿದ್ದಾನೆ. ಚಿತ್ರದಲ್ಲಿ ಹೆಸರಾಂತ ಹೀರೋಗಳಿಲ್ಲ. ಕಂಗನಾಳೇ ಚಿತ್ರದ ಹೀರೋ ಕೂಡಾ.

`ಪಟೇಲ್ ಕಿ ಪಂಜಾಬಿ ಶಾದಿ’ : ಹೆಸರೇ ಹೇಳುವಂತೆ ಇದೊಂದು ಕಾಮಿಡಿ ಸಿನಿಮಾ. ಜೊತೆಗೇ ರೊಮ್ಯಾಂಟಿಕ್ ಕೂಡಾ ಇದರ ಭಾಗವಾಗಿದೆ. ಸಿನಿಮಾದಲ್ಲಿ ರಿಷಿಕಪೂರ್, ಪರೇಶ್ ರಾವಲ್, ವೀರ್ ದಾಸ್, ಪಾಯಲ್ ಘೋಶ್ ಮೊದಲಾದವರು ನಟಿಸಿದ್ದಾರೆ.

ಸಿನಿಮಾದಲ್ಲಿ ರಿಷಿಕಪೂರ್ ಪಂಜಾಬಿಯಾಗಿದ್ದರೆ ಪರೇಶ್ ರಾವಲ್ ಗುಜರಾತಿ. ಇವರ ಮಕ್ಕಳ ಮದುವೆಯ ಸಿನಿಮಾ ಇದು. ಪರೇಶ್ ರಾವಲ್ ಪುತ್ರಿಯಾಗಿ ಪಾಯಲ್ ಘೋಶ್ ಹಾಗೂ ರಿಷಿ ಮಗನಾಗಿ ವೀರ್ ದಾಸ್ ಅಭಿನಯಿಸಿದ್ದಾರೆ. ಸಂಜಯ್ ಚೆಲ್ ಈ ಚಿತ್ರದ ನಿರ್ದೇಶಕರು.

ಸಿನಿಮಾದಲ್ಲಿ ಸಕತ್ ಮೋಜುಮಸ್ತಿ ಇರುವುದು ನಿರೀಕ್ಷಿತ. ಸಿನಿಮಾದಲ್ಲಿ ನವರಾತ್ರಿ ಉತ್ಸವ ಕೂಡಾ ಹೈಲೈಟಾಗಿದೆ. `ಗಾರ್ಬಾ’ ಡ್ಯಾನ್ಸ್ ನಿಜವಾದ `ನವರಾತ್ರಿ’ ಸಮಯದಲ್ಲಿಯೇ ಶೂಟ್ ಮಾಡಿದ್ದು ಅದರಲ್ಲಿ 7000 ಜನರು ಭಾಗಿಯಾಗಿದ್ದರಂತೆ.

`ಲಕ್ನೋ ಸೆಂಟ್ರಲ್’ : ಫರ್ಹಾನ್ ಅಕ್ತರ್ `ರಾಕ್ ಆನ್ 2′ ಸಿನಿಮಾದ ಬಳಿಕ ಮತ್ತೆ `ಲಕ್ನೋ ಸೆಂಟ್ರಲ್’ ಮೂಲಕ ತೆರೆಯ ಮೇಲೆ ಬರುತ್ತಿದ್ದಾನೆ. ರಂಜಿತ್ ತಿವಾರಿಯವರ ಈ ಸಿನಿಮಾದಲ್ಲಿ ಮೊದಲ ಬಾರಿಗೆ `ಕಾಕ್ ಟೈಲ್’ ಫೇಮಿನ ಡಯನಾ ಫೆಂಟಿ ಜೊತೆ ಅಕ್ತರ್ ಅಭಿನಯಿಸಿದ್ದಾನೆ. ಈಗಾಗಲೇ ಪ್ರೀಮಿಯರ್ ಶೋ ನೋಡಿದ ಬಾಲಿವುಡ್ ಮಂದಿ ಈ ಚಿತ್ರಕ್ಕೆ ಥಮ್ಸ್ ಅಪ್ ಹೇಳಿದ್ದಾರೆ.

ಫರ್ಹಾನ್ ಈ ಸಿನಿಮಾದಲ್ಲಿ ಉತ್ತರಪ್ರದೇಶದ ಹಳ್ಳಿಯೊಂದರ ಸಾಮಾನ್ಯ ವ್ಯಕ್ತಿಯಾಗಿದ್ದು ಆತ ಕೊಲೆ ಕೇಸಿನಲ್ಲಿ ಆರೋಪಿಯಾಗಿ ಲಕ್ನೋದ ಸೆಂಟ್ರಲ್ ಜೈಲು ಸೇರುವವನ ಪಾತ್ರದಲ್ಲಿ ನಟಿಸಿದ್ದಾನೆ. ಡಯಾನಾ ಸಿನಿಮಾದಲ್ಲಿ ಎನ್‍ಜಿಓ ಕಾರ್ಯಕರ್ತೆಯಾಗಿದ್ದು ಜೈಲು ಹಕ್ಕಿಗಳಿಗಾಗಿ `ಮ್ಯೂಸಿಕಲ್ ಬ್ಯಾಂಡ್’ ರಚಿಸುತ್ತಾಳೆ. ಆವಾಗಲೇ ಇವರಿಬ್ಬರಿಗೆ ಪರಿಚಯವಾಗುತ್ತದೆ. ಮತ್ತೆ ಸಂಗೀತವೇ ಫರ್ಹಾನ್ ಜೀವನದ ಭಾಗವಾಗುತ್ತದೆ. ಇದೊಂದು ವಿಭಿನ್ನ ಕತೆಯಾಗಿದ್ದು ಸಿನಿಪಂಡಿತರ ಪ್ರಕಾರ ಚಿತ್ರ ಹಿಟ್ ಆಗಬಲ್ಲ ಎಲ್ಲ ಅಂಶಗಳೂ ಚಿತ್ರದಲ್ಲಿದೆ.