ಪ್ರೇಮಿ ನನಗಿಂತ ಚಿಕ್ಕವನು….

Les amoureux de Marine Drive… Gli innamorati di Marine Drive

ಪ್ರ : ನನ್ನ ವಯಸ್ಸೀಗ 28. ಅವನಿಗಿನ್ನೂ 24. ನಾವಿಬ್ಬರೂ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಅವನು ನನಗಿಂತ ನಾಲ್ಕು ವರ್ಷ ಚಿಕ್ಕವನಾದರೂ ನಾವಿಬ್ಬರೂ ಸಮವಯಸ್ಕರಂತೆ ಕಾಣುತ್ತೇವೆ. ಆದರೂ ಅವನಿಗಿಂತ ನಾನು ದೊಡ್ಡವಳು ಅನ್ನುವ ಒಂದೇ ಕಾರಣಕ್ಕೆ ನಮ್ಮ ಸಂಬಂಧ ಅವನ ತಂದೆ, ತಾಯಿಗೆ ಇಷ್ಟವಿಲ್ಲ. ಅವರು ನನ್ನಿಂದ ದೂರವಿರುವಂತೆ ಅವನಿಗೆ ರಗಳೆ ಮಾಡುತ್ತಿರುತ್ತಾರೆ. ಅವನೇನೂ ಅವರ ಮಾತಿಗೆ ಕೇರ್ ಮಾಡುತ್ತಿಲ್ಲ. ಅವರ ವಿರೋಧದ ಹೊರತಾಗಿಯೂ ನನ್ನನ್ನು ಮದುವೆಯಾಗಲು ಅವನು ತಯಾರಿದ್ದಾನೆ. ಆದರೆ ನನಗೇ ನಮ್ಮ ಸಂಬಂಧ ಮುಂದುವರಿಸುವ ಬಗ್ಗೆ ಮನಸ್ಸಿನಲ್ಲಿ ಸ್ವಲ್ಪ ಅಳುಕಿದೆ. ಎಷ್ಟೆಂದರೂ ನನಗೆ ಅವನಿಗಿಂತ ಬೇಗ ವಯಸ್ಸಾಗುವುದರಿಂದ ಮುಂದೆ ಅವನು ನನ್ನನ್ನು ಡಂಪ್ ಮಾಡಿ ಬೇರೆಯವರ ಜೊತೆ ಅಫೇರ್ ಶುರುವಿಟ್ಟುಕೊಂಡರೆ ಎನ್ನುವ ಆತಂಕ ನನ್ನನ್ನು ಕಾಡುತ್ತಿದೆ. ಮದುವೆಯಾದ ಕೂಡಲೇ ಅವನು ಆ ರೀತಿ ಮಾಡುತ್ತಾನೆ ಅಂತಲ್ಲ. ಮುಂದೆ ಅವನು ಆ ರೀತಿ ಮಾಡಲೂಬಹುದೇನೋ ಅನ್ನುವ ವಿಚಾರ ನನ್ನ ತಲೆ ತಿನ್ನುತ್ತಿದೆ. ಈಗ ಅವನನ್ನು ಬಿಡಲೂ ಮನಸ್ಸು ಬರುತ್ತಿಲ್ಲ. ಅವನ ಜೊತೆಗಿನ ಸಂಬಂಧ ಕಳಚಿಕೊಂಡು ಬೇರೆ ಯಾರಾದರೂ ನನಗಿಂತ ದೊಡ್ಡವರನ್ನು ಹುಡುಕುವುದು ಒಳ್ಳೆಯದೇನೋ ಅಂತ ಒಮ್ಮೊಮ್ಮೆ ಅನಿಸುತ್ತದೆ. ಈ ವಿಷಯದಲ್ಲಿ ನಿಮ್ಮ ಸಲಹೆ ಏನು?

:  ಈ ವಯಸ್ಸಿನ ಅಂತರ ಅನ್ನುವುದು ಅವರವರ ಮನೋಭಾವಕ್ಕೆ ಬಿಟ್ಟ ವಿಚಾರ. ನೋಡಲೂ ನೀವು ಅವನಿಗಿಂತ ದೊಡ್ಡವರು ಅಂತ ಕಾಣುವುದಿಲ್ಲವಾದ ಕಾರಣ ಹೊರಗಿನವರಿಗೆ ನೀವು ಹೇಳದ ಹೊರತು ನಿಮಗಿಂತ ಅವನು ಚಿಕ್ಕವನು ಅಂತ ಗೊತ್ತಾಗುವುದೂ ಇಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ದಾಂಪತ್ಯದಲ್ಲಿ ಬೇಕಿರುವುದು ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಳ್ಳುವುದು. ಅವನು ನಿಮಗಿಂತ ಚಿಕ್ಕವನಾದರೂ ಮೆಚುರಿಟಿ ಇದ್ದರೆ ಯಾವ ಸಮಸ್ಯೆಯೂ ಬರಲಿಕ್ಕಿಲ್ಲ. ಮಹಿಳೆಯರಿಗೆ ಪುರುಷರಿಗಿಂತ ಸ್ವಲ್ಪ ಬೇಗ ವಯಸ್ಸು ಇಳಿಯುವುದಾದರೂ ಸಮತೋಲಿತ ಆಹಾರ, ಲಘುವ್ಯಾಯಾಮದಿಂದ ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಾಧ್ಯವಿದೆ. ಅದೂ ಅಲ್ಲದೇ ಬರೀ ವಯಸ್ಸಾಯಿತು ಅನ್ನುವ ಕಾರಣಕ್ಕೆ ಬೇರೆಯವರ ಜೊತೆ ಸಂಬಂಧ ಬೆಳೆಸುವ ಮನೋಭಾವದವರು ಬೇರೆ ಯಾವುದಾದರೂ ಕ್ಷುಲ್ಲಕ ಕಾರಣಕ್ಕೂ ವಿವಾಹಬಾಹಿರ ಸಂಬಂಧ ಬೆಳೆಸುವುದಿಲ್ಲ ಅಂತ ಗ್ಯಾರೆಂಟಿಯೇನು? ನಿಮಗೆ ಅವನ ನಡೆವಳಿಕೆಯ ಬಗ್ಗೆ ಸಂದೇಹವಿದೆಯಾ? ಹಾಗಿದ್ದರೆ ಈಗಲೇ ಆ ಸಂಬಂಧದಿಂದ ಹೊರಬರುವುದು ಉತ್ತಮ. ಅದಲ್ಲವಾದರೆ ನಿಮಗೇ ನೀವು ಅವನಿಗಿಂತ ದೊಡ್ಡವಳು ಅನ್ನುವ ಬಗ್ಗೆ ಕೀಳರಿಮೆ ಇದೆ ಅನಿಸುತ್ತಿದೆ. ಮುಂದೆ ದಾಂಪತ್ಯ ಸರಿ ಹೋಗುವುದಿಲ್ಲವೇನೋ ಅಂತ ನಿಮಗೇ ಆತ್ಮವಿಶ್ವಾಸದ ಕೊರತೆಯಿದೆ. ನೀವು ಮೊದಲು ಗಟ್ಟಿಮನಸ್ಸು ಮಾಡಿಕೊಂಡು ನಿಮಗೇನು ಬೇಕು ಅಂತ ನಿರ್ಧರಿಸಿ. ಏನೇ ಆದರೂ ಅವನನ್ನು ವರಿಸುವ ಮನಸ್ಸು ನಿಮ್ಮದಾಗಿದ್ದರೆ ಉಳಿದೆಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ನಿಮ್ಮಿಬ್ಬರ ಪ್ರೀತಿ ಗಟ್ಟಿಯಾಗಿದ್ದರೆ ಅವನಿಗೆ ತನ್ನ ಹೆತ್ತವರನ್ನು ಹೇಗಾದರೂ ಮದುವೆಗೆ ಒಪ್ಪಿಸುವುದು ಕಷ್ಟವಾಗಲಾರದು.