`ಅತ್ಯಾಚಾರಿ’ಯನ್ನು ಪ್ರೇಮಿಸುತ್ತಿದ್ದೇನೆ, ಆತನ ಮಗುವಿಗೆ ಜನ್ಮ ನೀಡುತ್ತೇನೆ ಎಂದು ಕೋರ್ಟಿಗೆ ಹೇಳಿದ ಯುವತಿ !

ಸಾಂದರ್ಭಿಕ ಚಿತ್ರ

ಅಹಮದಾಬಾದ್ : ತನ್ನ `ಅತ್ಯಾಚಾರಿ’ಯನ್ನು ತಾನು ಪ್ರೇಮಿಸುತ್ತಿದ್ದೇನೆ ಹಾಗೂ ಆತನ ಮಗುವಿಗೆ ಜನ್ಮ ನೀಡಲು ಬಯಸುತ್ತೇನೆ ಎಂದು ಹೇಳಿದ ಗರ್ಭಿಣಿ ಯುವತಿಯನ್ನು ಆಕೆಯನ್ನು ಅತ್ಯಾಚಾರಗೈದಿದ್ದಾನೆನ್ನಲಾದ ಯುವಕನ ಮನೆಗೆ ಕರೆದುಕೊಂಡು ಹೋಗುವಂತೆ ಆನಂದ್ ಜಿಲ್ಲೆಯ ಪೊಲೀಸರಿಗೆ ಗುಜರಾತ್ ಹೈಕೋರ್ಟ್ ನಿರ್ದೇಶನ ನೀಡಿದ ಅಪರೂಪದ ಘಟನೆ ಬುಧವಾರ ನಡೆದಿದೆ.

ಕೆಳಗಿನ ನ್ಯಾಯಾಲಯವೊಂದು ಆಕೆಗೆ ತನ್ನ 24 ವಾರಗಳ ಗರ್ಭವನ್ನು ಕಳಚಲು ಅನುಮತಿ ನಿರಾಕರಿಸಿದ ನಂತರ ಯುವತಿ ಹೈಕೋರ್ಟಿನ ಮೆಟ್ಟಲೇರಿದ್ದಳು. ಆದರೆ ಬುಧವಾರ ತನ್ನ ನಿಲುವು ಬದಲಾಯಿಸಿದ್ದ ಯುವತಿ, ತಾನು ಆರೋಪಿಯ ಮನೆಯಲ್ಲಿಯೇ ಉಳಿದು ಆತನ ಮಗುವಿಗೆ ಜನ್ಮ ನೀಡುವುದಾಗಿ ತಿಳಿಸಿದಳು.

ಆಕೆಯ ಮೇಲೆ ಅತ್ಯಾಚಾರಗೈದ ಯುವಕನನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ ಆತ ತಾನು ಯುವತಿ ಮತ್ತಾಕೆಯ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ನ್ಯಾಯಾಲಯಕ್ಕೆ ಆಶ್ವಾಸನೆ ನೀಡಿದ್ದಾನೆ.
ಆಕೆಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿತ್ತು.