ಕೆಲಸದವನ ಮೇಲೆ ಪ್ರೇಮ

ಶ್ರೀಮಂತ ಕುಟುಂಬದ ಹುಡುಗಿ ಬಡಹುಡುಗನನ್ನು ಏನೆಲ್ಲ ಕಸರತ್ತು ಮಾಡಿ ಪ್ರೀತಿಸಿ ಮದುವೆಯಗಿ ತನ್ನಷ್ಟು ಆದರ್ಶಪ್ರೇಮಿ ಜಗತ್ತಿನಲ್ಲೇ ಇಲ್ಲ ಅಂತ ಸಿನಿಮಾದಲ್ಲಿ ತೋರಿಸುವ ಶೈಲಿ ನಿಮ್ಮ ಮೇಲೆ ಪ್ರಭಾವ ಬೀರಿದೆ ಅಂತಲೇ ಕಾಣುತ್ತದೆ.

ಪ್ರ : ನಾನು ವೈದಿಕ ಕುಟುಂಬದಲ್ಲಿ ಜನಿಸಿದವಳು. ಮೊದಲನೇ ವರ್ಷದ ಡಿಗ್ರಿಯಲ್ಲಿ ಓದುತ್ತಿದ್ದೇನೆ. ನಮ್ಮ ಮನೆಯಲ್ಲಿ ಪೂಜೆ-ಪುನಸ್ಕಾರಗಳು ಯಾವಾಗಲೂ ನಡೆಯುತ್ತಿರುತ್ತದೆ. ಮನೆಯವರ ಒತ್ತಾಯಕ್ಕೆ ನಾನು ಪೂಜೆಯಲ್ಲೆಲ್ಲ ಪಾಲ್ಗೊಂಡರೂ ನನಗೆ ನಿಜವಾಗಿ ಅದರಲ್ಲೆಲ್ಲ ಆಸಕ್ತಿ ಇಲ್ಲ. ನನಗೆ ಸಿನಿಮಾ ನೋಡುವುದೆಂದರೆ ಎಲ್ಲಿಲ್ಲದ ಹುಚ್ಚು. ಮನೆಯವರಿಗೆ ಗೊತ್ತಿಲ್ಲದಂತೆ ಅನೇಕ ಸಿನಿಮಾ ನೋಡಿದ್ದೇನೆ. ನಮ್ಮ ಮನೆ ಹಳ್ಳಿಯಲ್ಲಿ ಇರುವುದರಿಂದ  ಮೂರು ಕಿಲೋಮೀಟರ್ ನಡೆದುಕೊಂಡು ಹೋಗಿ ಅಲ್ಲಿಂದ ಬಸ್ಸು ಹಿಡಿದು ಹದಿನೈದು ಕಿಲೋಮೀಟರ್ ದೂರದಲ್ಲಿರುವ ನಮ್ಮ ಕಾಲೇಜಿಗೆ ಹೋಗಬೇಕು. ಅದಕ್ಕಾಗಿ ಪೇಟೆಯಲ್ಲಿಯೇ ನನ್ನ ಗೆಳತಿಯೊಬ್ಬಳ ಜೊತೆ ರೂಮಿನಲ್ಲಿ ಇದ್ದೇನೆ. ವಾರಕ್ಕೊಮ್ಮೆ ಮನೆಗೆ ಹೋಗುವುದು. ಆದರೆ ಈಗೀಗ ದಿನಾ ಮನೆಗೆ ಹೋಗಬೇಕು ಅನಿಸುತ್ತಿದೆ. ಅದಕ್ಕೆ ಕಾರಣನಾದವನು ನಮ್ಮ ಮನೆಯ ಕೆಲಸದವನು. ಅವನಿಗೆ ವಯಸ್ಸು ಇಪ್ಪತ್ತಿರಬಹುದು. ಆತ ಓದಿಲ್ಲ. ಆದರೆ ತುಂಬಾ ಚುರುಕಾಗಿದ್ದಾನೆ. ಕಪ್ಪಿದ್ದರೂ ನೋಡಲು ಲಕ್ಷಣವಾಗಿದ್ದಾನೆ. ಯಾವಾಗಲೂ ಚಿಕ್ಕ ರೇಡಿಯೋದಲ್ಲಿ ಪದ್ಯ ಕೇಳುತ್ತ ತನ್ನಷ್ಟಕ್ಕೆ ತಾನು ಹಾಡುತ್ತಾ ಖುಶಿಯಿಂದ ಕೆಲಸ ಮಾಡುವ ಅವನನ್ನು ನೋಡುತ್ತಿರುವುದು ನನಗಿಷ್ಟವಾಗುತ್ತಿದೆ. ಒಮ್ಮೊಮ್ಮೆ ಅವನು ಸೈಕಲ್ಲಿನಲ್ಲಿ ನನಗೆ ಬಸ್‍ಸ್ಟಾಂಡ್‍ವರೆಗೆ ಬಿಟ್ಟೂ ಬರುತ್ತಾನೆ. ಕಾಲೇಜಿಂದ ಬರುವ ಸಮಯದಲ್ಲೂ ಅಮ್ಮ ನನ್ನನ್ನು ಕರೆತರಲು ಅವನನ್ನೇ ಕಳಿಸುತ್ತಾಳೆ. ನನಗೆ ಅವನು ಇಷ್ಟವಾಗುತ್ತಿದ್ದಾನೆ. ಅವನಲ್ಲಿ ನನ್ನ ಪ್ರೇಮನಿವೇದನೆ ಮಾಡಿಕೊಂಡರೆ ತಪ್ಪೇ?

ಉ : ನೀವು ಸಿನಿಮಾ ನೋಡಿದ್ದು ಜಾಸ್ತಿಯಾಯಿತು, ಅದಕ್ಕೇ ನಿಮ್ಮ ಮನಸ್ಸು ಹೀಗೆ ಹುಚ್ಚುಚ್ಚಾಗಿ ಓಡುತ್ತಿದೆ. ಮೊದಲೇ ಹುಚ್ಚುಕೋಡಿ ವಯಸ್ಸು, ಅದಕ್ಕೆ ಸರಿಯಾಗಿ ಸಿನಿಮಾದ ಪ್ರಭಾವ. ಶ್ರೀಮಂತ ಕುಟುಂಬದ ಹುಡುಗಿ ಬಡಹುಡುಗನನ್ನು ಏನೆಲ್ಲ ಕಸರತ್ತು ಮಾಡಿ ಪ್ರೀತಿಸಿ ಮದುವೆಯಗಿ ತನ್ನಷ್ಟು ಆದರ್ಶಪ್ರೇಮಿ ಜಗತ್ತಿನಲ್ಲೇ ಇಲ್ಲ ಅಂತ ಸಿನಿಮಾದಲ್ಲಿ ತೋರಿಸುವ ಶೈಲಿ ನಿಮ್ಮ ಮೇಲೆ ಪ್ರಭಾವ ಬೀರಿದೆ ಅಂತಲೇ ಕಾಣುತ್ತದೆ. ಇನ್ನೂ ನಿಮ್ಮ ವಯಸ್ಸು ಹದಿನೆಂಟೂ ದಾಟಿರಲಿಕ್ಕಿಲ್ಲ. ಈಗ ಅದನ್ನೆಲ್ಲ ಯೋಚಿಸುವ ಸಮಯವೇ? ಈ ವಯಸ್ಸಿನಲ್ಲಿ ಮನಸ್ಸು ಮರ್ಕಟದಂತೆ ಓಡುತ್ತಿರುತ್ತದೆ. ಆದರೆ ಅದಕ್ಕೆ ಕಡಿವಾಣ ಹಾಕಿ ಕೊಳ್ಳಲೇಬೇಕಲ್ಲವೇ? ಒಂದುವೇಳೆ ನೀವು ನಿಮ್ಮ ಕೆಲಸದವನನ್ನು ಪ್ರೀತಿಸಿದರೆ ನಿಮ್ಮ ಮನೆಯವರು ಅದಕ್ಕೆ ಖಂಡಿತಾ ವಿರೋಧ ವ್ಯಕ್ತಪಡಿಸುತ್ತಾರೆ.  ಅವರನ್ನೆಲ್ಲ ಧಿಕ್ಕರಿಸಿ ನೀವು ಅವನ ಜೊತೆ ಓಡಿಹೋಗಿ ಮದುವೆಯಾದರೂ ಬಿಸಿ ಇಳಿದ ಹಾಗೆ ನಿಮ್ಮ ಭ್ರಮೆಯೂ ಕಳಚುತ್ತದೆ. ಒಳ್ಳೆಯ ಕುಟುಂಬದಲ್ಲಿ ಹುಟ್ಟಿದ ನೀವು ಅವನ ಜೀವನಶೈಲಿಗೆ ಹೊಂದಿ ಕೊಳ್ಳಲಾರದೇ ಒದ್ದಾಡುವಂತಾಗುತ್ತದೆ. ವಿದ್ಯೆಯೂ ಇಲ್ಲದ ಅವನ ಜೊತೆ ಬಾಳುವುದು ದುಸ್ತರವೇ ಆಗುತ್ತದೆ. ವಾಪಾಸು ಮನೆಗೂ ಹೋಗಲಾರದೇ ಅವನ ಜೊತೆ ಬಾಳಲೂ ಆಗದೇ ಕಣ್ಣೀರು ಸುರಿಸುವುದೇ ಆಗಬಹುದು. ಅಂತಹ ಹುಚ್ಚು ಸಾಹಸಕ್ಕೆ ಕೈಹಾಕದೇ ಈಗ ನಿಮ್ಮ ಮನೆಯವರು ಇಟ್ಟ ಭರವಸೆಗೆ ಚ್ಯುತಿಬರದಂತೆ ಓದಿನಲ್ಲೇ ಮನಸ್ಸನ್ನು ಕೇಂದ್ರೀಕರಿಸಿ.