ಟ್ಯೂಷನ್ ಮಾಸ್ಟರ್ ಮೇಲೆ ಲವ್

ಪ್ರ : ನನಗೀಗ 16 ವರ್ಷ. ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ಮ್ಯಾತ್ಸ್ ಮತ್ತು ಸೈನ್ಸ್ ಅಂದ್ರೆ ತುಂಬಾ ಕಷ್ಟ. ಅದಕ್ಕಾಗಿ ನಮ್ಮ ಮನೆಯವರು ನಮ್ಮ ಪಕ್ಕದ ರೋಡಿನಲ್ಲಿಯೇ ಇರುವ ಟ್ಯೂಷನ್ ಕ್ಲಾಸಿಗೆ ಕಳಿಸುತ್ತಿದ್ದಾರೆ. ನಮ್ಮ ಟ್ಯೂಷನ್ ಟೀಚರಿಗೆ 21 ವರ್ಷ ಅಷ್ಟೇ. ಅವರಿಗೆ ತಂದೆಯಿಲ್ಲ. ಮುಂದಿನ ಓದಿಗೆ ಹಣ ಹೊಂದಿಸಲಿಕ್ಕೋಸ್ಕರ ಕೆಲವು ಮಕ್ಕಳಿಗೆ ಪಾಠ ಹೇಳುತ್ತಾರೆ. ಅವರು ತುಂಬಾ ಒಳ್ಳೆಯ ಜನ. ನಮ್ಮನ್ನೆಲ್ಲ ಪ್ರೀತಿಯಿಂದ ಮಾತಾಡಿಸುತ್ತಾರೆ. ನನ್ನ ಅಪ್ಪ ಮತ್ತು ಅಣ್ಣ ಇಬ್ಬರೂ ತುಂಬಾ ಕೋಪಿಷ್ಠರು. ಸಣ್ಣಸಣ್ಣ ವಿಷಯಕ್ಕೆ ನನ್ನ ಮೇಲೆ ರೇಗಾಡುತ್ತಾರೆ. ಅದಕ್ಕಾಗಿ ನನಗೆ ಹುಡುಗರೆಂದರೇ ಭಯವಿತ್ತು. ಆದರೆ ನಮ್ಮ ಈ ಮೇಸ್ಟ್ರು ಹಾಗಲ್ಲ. ಅವರು ನನಗಿದ್ದ ಹೆದರಿಕೆಯನ್ನು ಓಡಿಸಿಬಿಟ್ಟರು. ಅವರನ್ನು ನಾನು ಪ್ರೀತಿಸುತ್ತಿದ್ದೇನೆ. ಅವರಿಂದಾಗಿಯೇ ನನಗೀಗ ಆ ಕಷ್ಟದ ಸಬ್ಜೆಕ್ಟಿನಲ್ಲೂ ಒಳ್ಳೆಯ ಮಾಕ್ರ್ಸ್ ಬರುತ್ತಿದೆ. ಅವರಿಗೆ ನಾನು ಪ್ರೀತಿಸುತ್ತಿರುವ ವಿಷಯ ಹೇಳಿಬಿಡಲಾ? ನಾನು ತಡ ಮಾಡಿದರೆ ಬೇರೆ ಯಾರನ್ನಾದರೂ ಅವರು ಪ್ರೀತಿಸಿ ಬಿಟ್ಟರೆ ನನ್ನ ಗತಿಯೇನು? ನನಗೆ ಅವರು ಬೇಕು. ಈಗೀಗ ಅವರು ನನ್ನ ಕನಸಿನಲ್ಲೂ ಬರುತ್ತಿದ್ದಾರೆ. ನನ್ನ ಕನಸು ನನಸಾಗುವುದೇ? 

ಉ : ನೋಡಮ್ಮಾ ಮರೀ, ನಿನಗಿನ್ನೂ ಚಿಕ್ಕ ವಯಸ್ಸು. ಈಗತಾನೇ ಹೊರಜಗತ್ತನ್ನು ಕಣ್ಣುಬಿಟ್ಟು ನೋಡುತ್ತಿದ್ದೀ. ಈಗಲೇ ಪ್ರೀತಿಪ್ರೇಮಾನಾ? ನಿನಗೆ ಅವರ ಮೇಲೆ ಉಂಟಾಗಿದ್ದು ನಿಜವಾದ ಪ್ರೀತಿಯಾ ಅಥವಾ ಬರೀ ಆಕರ್ಷಣೆಯಾ ಅಂತ ತಿಳಿಯದಿರುವಷ್ಟೂ ನಿನ್ನ ವಯಸ್ಸು ಚಿಕ್ಕದು. ಈಗ ಇವರಿಷ್ಟವಾದರೆ ಸ್ವಲ್ಪ ದಿನದಲ್ಲಿ ಕಾಲೇಜಿಗೆ ಹೋಗುತ್ತೀ. ಅಲ್ಲಿಯ ವಾತಾವರಣದಲ್ಲಿ ಬೇರೆ ಯಾರದೋ ಮೇಲೆ ಕ್ರಶ್ ಆಗಬಹುದು. ಆಗ ನೀನು ನಿನ್ನ ಈ ಟ್ಯೂಷನ್ ಟೀಚರನ್ನೇ ಮರೆಯಬಹುದು. ನಿನ್ನ ಸಂಪರ್ಕಕ್ಕೆ ಬಂದ ಕೆಲವೇ ಹುಡುಗರಲ್ಲಿ ಅವರು ಹೀರೋವಾಗಿ ಈಗ ಕಾಣಿಸಬಹುದು. ಮುಂದೆ ನಿನಗೇ ನಿನ್ನ ಭಾವನೆ ಬಗ್ಗೆ ಸಿಲ್ಲಿ ಅನಿಸಬಹುದು. ಆದ್ದರಿಂದ ಈಗಲೇ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಓದಿನ ಬಗ್ಗೆಯೇ ಗಮನ ಕೊಡು. ಈ ವರ್ಷ ಹತ್ತನೇ ತರಗತಿಯಲ್ಲಿ ಇರುವುದರಿಂದ ಉತ್ತಮ ಅಂಕ ಪಡೆಯದಿದ್ದಲ್ಲಿ ಒಳ್ಳೆಯ ಕಾಲೇಜಿಗೆ ಸೇರುವುದೂ ಕಷ್ಟವಾಗಬಹುದು.  ಆ ಟೀಚರ್‍ನಿಂದಾಗಿ ನಿನ್ನ ಕಷ್ಟದ ವಿಷಯಗಳೂ ಇಷ್ಟವಾಗತೊಡಗಿದ್ದರಿಂದ ಅವರ ಬಗ್ಗೆ ಗೌರವ ಇರಲಿ. ಆದರೆ ಈಗಲೇ ಪ್ರೀತಿಯ ಬಲೆಗೆ ಬಿದ್ದು ಜೀವನದಲ್ಲಿ ಏನೂ ಸಾಧಿಸಲಾಗದೇ ಮುಂದೆ ನೊಂದುಕೊಳ್ಳುವ ಪ್ರಮೇಯ ತಂದುಕೊಳ್ಳಬೇಡ. ಅದೂ ಅಲ್ಲದೇ ಅವರಿಗೂ ನಿನ್ನ ಮೇಲೆ ಅದೇ ಭಾವನೆ ಇರಬೇಕೆಂದೂ ಇಲ್ಲ. ಸುಮ್ಮನೇ ಸಮಯ ವ್ಯರ್ಥ ಮಾಡದೇ ನಿನ್ನ ಕರ್ತವ್ಯದ ಕಡೆ ಗಮನಹರಿಸು.