ಲೇಡಿ ಬಾಸ್ ಮೇಲೆ ಲವ್

ಪ್ರ : ನನಗೀಗ 27 ವರ್ಷ. ನಾನು ಈ ಕೆಲಸಕ್ಕೆ ಸೇರಿ ಆರು ತಿಂಗಳಾಯಿತು. ಈ ಕೆಲಸಕ್ಕೋಸ್ಕರ ನಾನು ಬಹಳ ಕಷ್ಟಪಟ್ಟಿದ್ದೆ. ನಮ್ಮ ಬಾಸ್ ಒಬ್ಬರು ಲೇಡಿ. ಅವರ ತಂದೆ ಮೊದಲು ಈ ಕಂಪೆನಿ ನಡೆಸುತ್ತಿದ್ದರು. ಅವರ ಅಕಾಲಿಕ ಮರಣದ ನಂತರ ಅವರ ಮಗಳೇ ಈಗ ಈ ಕಂಪೆನಿಯ ಹೆಡ್. ಆಕೆಗೆ 25 ವರ್ಷ ವಯಸ್ಸಿರಬಹುದು. ಅಷ್ಟು ಚಿಕ್ಕ ಪ್ರಾಯದಲ್ಲಿಯೇ ಅವರು ಯಶಸ್ವಿಯಾಗಿ ಬಿಸಿನೆಸ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರು ಎಲ್ಲರ ಜೊತೆ ಮುಕ್ತವಾಗಿ ಬೆರೆಯುತ್ತಾ ಕೆಲಸ ತೆಗೆದುಕೊಳ್ಳುವ ರೀತಿಗೆ ಮಾರುಹೋಗಿದ್ದೇನೆ. ನಾನು ಈಗ ಒಂದು ಸೆಕ್ಷನ್ನಿಗೆ ಹೆಡ್ ಆಗಿದ್ದೇನೆ. ಕೆಲವು ಮೀಟಿಂಗ್ ಅಟೆಂಡ್ ಆಗಲು ನನ್ನನ್ನೂ ಜೊತೆಯಲ್ಲಿ ಕರೆದುಕೊಂಡುಹೋಗುತ್ತಾರೆ. ಅವರ ಮನಸ್ಸು ತುಂಬಾ ಒಳ್ಳೆಯದು. ಎಲ್ಲ ಸಿಬ್ಬಂದಿಗಳ ಜೊತೆಗೂ ನಯವಿನಯದಿಂದ ಮಾತಾಡುತ್ತಾರೆ. ಅದರಲ್ಲೂ ನನ್ನ ಜೊತೆ ಇನ್ನಷ್ಟು ಸಲುಗೆಯಿಂದ ಇದ್ದಾರೆ. ಅವರ ಗುಣಸ್ವಭಾವ ಮತ್ತು ಆಕರ್ಷಕ ವ್ಯಕ್ತಿತ್ವಕ್ಕೆ ಮಾರುಹೋಗಿದ್ದೇನೆ. ನನಗೊಬ್ಬಳು ಊರಿನಲ್ಲಿ ಗರ್ಲ್‍ಫ್ರೆಂಡ್ ಇದ್ದಾಳೆ. ಅವಳಿಗ ನನ್ನ ಜೊತೆ ಹೆಚ್ಚು ಮಾತಾಡುತ್ತಲೂ ಇಲ್ಲ. ನಮ್ಮಿಬ್ಬರ ಮಧ್ಯೆ ಅಂತಹ ಹೇಳಿಕೊಳ್ಳುವಂತಹ ರಿಲೇಶನ್‍ಶಿಪ್ ಇಲ್ಲ. ಈಗ ಈ ನಮ್ಮ ಬಾಸನ್ನು ನೋಡಿದ ನಂತರ ನನಗೆ ಇವರ ಸಹವಾಸವೇ ಇಷ್ಟವಾಗತೊಡಗಿದೆ. ಮೊದಲಿನ ಹುಡುಗಿಯ ಜೊತೆಗೆ ಬ್ರೇಕಪ್  ಮಾಡಿಕೊಂಡು ಇವರಿಗೆ ನನ್ನ ಪ್ರೀತಿಯ ವಿಷಯ ತಿಳಿಸಿಬಿಡಬೇಕೆಂದಿದ್ದೇನೆ. ನಿಮ್ಮ ಅಭಿಪ್ರಾಯವೇನು?

: ಸ್ವಲ್ಪ ಹುಶಾರು ಮಾರಾಯ… ಹೆಚ್ಚೂಕಡಿಮೆ ಮಾಡಲು ಹೋಗಿ ಕಪಾಳಮೋಕ್ಷ ಮಾಡಿಸಿಕೊಳ್ಳಬೇಕಾದೀತು ಇಲ್ಲಾ ನಿಮ್ಮ ಕೆಲಸಕ್ಕೇ ಸಂಚಕಾರ ಬಂದೀತು. ನಿಮ್ಮ ಬಾಸ್ ಒಬ್ಬರು ಶಿಕ್ಷಿತ ಮಾನವೀಯತೆ ಇರುವ ಮಹಿಳೆ ಇರಬಹುದು. ಎಲ್ಲರ ಕಷ್ಟಸುಖಕ್ಕೆ ಸ್ಪಂದಿಸುವ ಮೃದುಮನಸ್ಸಿನ ಹುಡುಗಿಯಾಗಿರಬಹುದು. ಜೊತೆಗೇ ಎಲ್ಲರ ಸಹಕಾರ ಪಡೆದು ತನ್ನ ಕಂಪೆನಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬಲ್ಲ ಚಾಕಚಕ್ಯತೆಯೂ ಅವರಲ್ಲಿದೆ ಅಂತಾಯಿತು. ನೀವು ಒಂದು ಸೆಕ್ಷನ್ನಿನ ಹೆಡ್ ಆದ ಕಾರಣ ಅವರು ತನ್ನ ಉಳಿದ ಸಬ್ಬಂದಿಗಳ ಕೆಲಸಕಾರ್ಯಗಳ ಮಾಹಿತಿ ಪಡೆಯಲು ಅವರು ಆಗಾಗ ನಿಮ್ಮ ಜೊತೆ ಮಾತಾಡುತ್ತಿರಬಹುದು. ತನ್ನ ಕಂಪೆನಿಯ ಬಗ್ಗೆ  ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ ನಿಮ್ಮ ಸಹಕಾರ ಬೇಕಾಗಬಹುದು ಅಂತ ಮೀಟಿಂಗಿಗೂ ನಿಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿರಬಹುದು. ಅಷ್ಟಕ್ಕೇ ಅವರಿಗೆ ನಿಮ್ಮ ಮೇಲೆ ಒಲವಿದೆ ಅಂತ ಹೇಗೆ ಹೇಳುವುದು? ಅದೂ ಅಲ್ಲದೇ ನಿಮಗೀಗಾಗಲೇ ಒಬ್ಬಳು ಗರ್ಲ್‍ಫ್ರೆಂಡ್ ಇದ್ದಾಳೆ. ಕೆಲಸದ ಒತ್ತಡದಲ್ಲಿಯೋ ಇಲ್ಲಾ ಬೇರೆ ಯಾವ ಕಾರಣಕ್ಕೋ ನಿಮ್ಮ ಜೊತೆ ಹೆಚ್ಚು ಮಾತಾಡುತ್ತಿಲ್ಲ ಅಂದಾಕ್ಷಣ ಅವಳ ಜೊತೆ ಬ್ರೇಕಪ್ ಮಾಡಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ. ಕಂಪೆನಿಯ ಲೇಡಿ ಬಾಸನ್ನೇ ಪಟಾಯಿಸಿದರೆ ಆ ಕಂಪೆನಿಯೇ ನಿಮ್ಮದಾಗಬಹುದು ಅನ್ನುವ ದೂ(ದು)ರಾಲೋಚನೆ ನಿಮ್ಮದಿದ್ದರೆ ಅದನ್ನು ಈಗಲೇ ತಲೆಯಿಂದ ಮೊದಲು ತೆಗೆದುಹಾಕು.