`ಪ್ರೀತಿ ಬಲವಂತದಿಂದ ಬರುವಂತದ್ದಲ್ಲ’

ಸಾಂದರ್ಭಿಕ ಚಿತ್ರ

ಪ್ರ : ಅವಳೂ ನಾನೂ ಹೈಸ್ಕೂಲಿನಿಂದಲೂ ಕ್ಲಾಸ್‍ಮೇಟ್ಸ್. ಅವಳು ನನಗೆ ದೂರದಿಂದ ಸಂಬಂಧಿಯೂ ಆಗಬೇಕು. ಜೊತೆಯಲ್ಲೇ ಪಿಯುಸಿ ಮುಗಿಸಿ ಈಗ ಡಿಗ್ರಿಗೆ ಸಿಟಿಯ ಕಾಲೇಜಿಗೆ ಸೇರಿಕೊಂಡಿದ್ದೇವೆ. ನಾನೊಂದು ಪಿಜಿಯಲ್ಲಿದ್ದು ಕಾಲೇಜಿಗೆ ಹೋಗುತ್ತೇನೆ. ಅವಳು ದಿನಾ ಬಸ್ಸಿನಲ್ಲಿ ಓಡಾಡುವುದು ಕಷ್ಟವಾದರೂ ಮನೆಯಿಂದಲೇ ಕಾಲೇಜಿಗೆ ಬರುತ್ತಾಳೆ. ಅವಳ ಬಗ್ಗೆ ನನಗೆ ಮನದಲ್ಲೇ ಪ್ರೀತಿ ಮೂಡಿದೆ. ಆದರೆ ಅವಳಲ್ಲಿ ಎಂದೂ ಹೇಳಿಕೊಂಡಿಲ್ಲ. ಕಳೆದ ಸೆಮೆಸ್ಟರಿನಿಂದ ನನಗೆ ಒಬ್ಬ ಗೆಳೆಯನಾಗಿದ್ದಾನೆ. ಅವನು ಶ್ರೀಮಂತ. ಕಾರಿನಲ್ಲೇ ಓಡಾಡುತ್ತಾನೆ. ಆದರೆ ಅವನು ತುಂಬಾ ಹೃದಯವಂತ. ಅವನಿಗೆ ಎಲ್ಲಿಗೆ ಹೋಗಬೇಕೆಂದರೂ ಜೊತೆಗೆ ನಾನೇ ಬೇಕು. ನಮ್ಮ ಮನೆಯಲ್ಲಿ ನನಗೆ ಪಿಜಿಗೆ ಮಾತ್ರ ಹಣ ಕೊಡುತ್ತಾರೆ. ಉಳಿದಂತೆ ಸಿನಿಮಾಗೆ ಹೋಗುವುದಿರಲಿ, ಹೊಟೇಲಿನಲ್ಲಿ ತಿನ್ನುವುದಿರಲಿ ನನ್ನ ಹತ್ತಿರ ಹಣವಿರುತ್ತಿರಲಿಲ್ಲ. ಅದು ನನ್ನ ಸ್ನೇಹಿತನಿಗೆ ಗೊತ್ತು. ಒತ್ತಾಯಿಸಿ ಕರೆದುಕೊಂಡು ಹೋಗಿ ಎಲ್ಲ ಖರ್ಚೂ ಅವನೇ ಭರಿಸುತ್ತಾನೆ. ನನ್ನ ಬಾಲ್ಯಗೆಳತಿ ಅವಕಾಶ ಸಿಕ್ಕಿದಾಗೆಲ್ಲ ನನ್ನ ಜೊತೆ ಮಾತಾಡುತ್ತಾಳೆ. ಆ ಸಮಯದಲ್ಲಿ ನನ್ನ ಈ ಗೆಳೆಯನೂ ನನ್ನ ಜೊತೆ ಇರುವುದರಿಂದ ಅವನ ಹತ್ತಿರವೂ ಅವಳು ಚೆನ್ನಾಗಿಯೇ ಮಾತಾಡುತ್ತಾಳೆ. ಒಮ್ಮೊಮ್ಮೆ ನನಗಿಂತಲೂ ಹೆಚ್ಚಿಗೆ ಸಲುಗೆ ಅವನ ಹತ್ತಿರ ತೋರಿಸುತ್ತಾಳೆ. ನನ್ನ ಈ ಗೆಳೆಯನಿಗೂ ಅವಳಲ್ಲಿ ಅನುರಾಗ ಬೆಳೆದಿದೆ. ತಮ್ಮಿಬ್ಬರನ್ನು ಒಂದು ಮಾಡು ಅಂತ ನನ್ನ ಹತ್ತಿರವೇ ಕೇಳುತ್ತಿದ್ದಾನೆ. ನಾನು ಪ್ರೀತಿಸುತ್ತಿದ್ದ ಹುಡುಗಿಯನ್ನೇ ನನ್ನ ಗೆಳೆಯನೂ ಇಷ್ಟಪಡುತ್ತಿರುವುದು ನನಗೆ ನೋವುಂಟು ಮಾಡುತ್ತಿದೆ. ಆದರೆ ನನ್ನ ಸ್ನೇಹಿತ ಎಲ್ಲ ವಿಧದಲ್ಲೂ ನನಗಿಂತ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಅವಳು ಅವನ ಜೊತೆಯೇ ಸುಖವಾಗಿರುತ್ತಾಳೆ. ನಾನು ಅವನಿಗಾಗಿ ನನ್ನ ಪ್ರೀತಿಯನ್ನು ತ್ಯಾಗ ಮಾಡಲಾ?

: ಸಿನಿಮಾದಂತೆ ನಿಮ್ಮದೂ ತ್ರಿಕೋನ ಪ್ರೇಮ ಕತೆಯಾಗುತ್ತಿದೆಯಲ್ಲಾ ಇಲ್ಲಾ ಸಿನಿಮಾ ಪ್ರಭಾವ ನಿಮ್ಮ ಜೀವನದ ಮೇಲೂ ಜಾಸ್ತಿ ಪರಿಣಾಮ ಬೀರುತ್ತಿರುವಂತಿದೆ. ನೀವೆಂದಾದರೂ ನಿಮ್ಮ ಗೆಳೆತಿಯ ಮನಸ್ಸನ್ನು ಅರಿತುಕೊಳ್ಳಲು ಬಯಸಿದ್ದೀರಾ? ಆ ಕೆಲಸ ಮೊದಲು ಮಾಡಿ. ಅವಳಲ್ಲಿ ಇನ್ನೂ ಯಾರ ಮೇಲೂ ಪ್ರೀತಿ ಹುಟ್ಟಿಲ್ಲದಿರಬಹುದು. ಇಲ್ಲಾ ಹುಟ್ಟಿದ್ದರೂ ನಿಮ್ಮಿಬ್ಬರ ಮೇಲೂ ಅವಳಿಗೆ ಅಂತಹ ಭಾವನೆ ಇಲ್ಲದೇ ಬೇರೆಯವರನ್ನೇ ಪ್ರೀತಿಸುತ್ತಿರಬಹುದು. ಯಾವುದಕ್ಕೂ ಅವಳ ಭಾವನೆ ಎಲ್ಲಕ್ಕಿಂತ ಮುಖ್ಯ. ಒಂದು ವೇಳೆ ಅವಳು ನಿಮ್ಮ ಗೆಳೆಯನನ್ನೇ ಬಯಸುತ್ತಿದ್ದರೆ ನೀವು ಅವರಿಬ್ಬರ ಮಧ್ಯೆ ಸೇತುವೆಯಾಗಿ ಇಬ್ಬರನ್ನೂ ಜೊತೆಗೂಡಿಸುವುದೇ ಉತ್ತಮ. ಯಾಕೆಂದರೆ ನೀವಿನ್ನೂ ಅವಳಲ್ಲಿ ನಿಮ್ಮ ಪ್ರೀತಿಯನ್ನು ಹೇಳಿಕೊಂಡಿರದ ಕಾರಣ ಅವಳೂ ನಿಮ್ಮನ್ನು ಒಳ್ಳೆಯ ಸ್ನೇಹಿತ ಅಂತಲೇ ಭಾವಿಸುತ್ತಿರಬಹುದು. ಆದರೆ ಅವಳಿಗೂ ನಿಮ್ಮಂತೆ ನಿಮ್ಮ ಮೇಲೇ ಮನಸ್ಸಿದ್ದರೆ ಸ್ನೇಹಿತನಿಗಾಗಿ ಅವನನ್ನು ಒಪ್ಪು ಅಂತ ಹೇಳುವುದೂ ಸರಿ ಅಲ್ಲ. ಅವನು ನಿಮಗೆ ತೋರಿಸುವ ಕಾಳಜಿ, ನಿಮಗೆ ನೀಡಿದ ಸಹಾಯವನ್ನು ಅವಳ ಮೂಲಕ ತೀರಿಸುವುದು ಯಾವ ನ್ಯಾಯ? ಅಂತಹ ಸಂದರ್ಭದಲ್ಲಿ ನೀವು ಈಗಾಗಲೇ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ವಿಷಯ ನಿಮ್ಮ ಗೆಳೆಯನಿಗೆ ಹೇಳಬಹುದು. ಅವನೂ ಅರ್ಥ ಮಾಡಿಕೊಂಡು ನಿಮ್ಮ ದಾರಿಯಿಂದ ಹಿಂದೆ ಸರಿಯಬಹುದು. ಆದರೆ ಬಲವಂತದಿಂದ ಅವಳಿಗೆ ಯಾರನ್ನಾದರೂ ಪ್ರೀತಿಸು ಅಂತ ಹೇಳುವುದು ಮಾತ್ರ ತಪ್ಪು.

 

LEAVE A REPLY