ಅತ್ತೆಯ ಮೇಲೆ ಪ್ರೀತಿ

ನಿಮ್ಮ ಹೆಂಡತಿ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದರೆ ಅದು ನಿಮ್ಮ ಹಣೆಬರಹ. ಹಾಗಂತ ತಾಯಿ ಸ್ಥಾನದಲ್ಲಿರುವ ಅತ್ತೆಗೇ ಲೈನ್ ಹೊಡೆಯುತ್ತೀರಲ್ಲಾ …

ಪ್ರ : ನನಗೀಗ 31 ವರ್ಷ. ಮದುವೆಯಾಗಿ ಎರಡು ವರ್ಷ ಆಯ್ತು. ನಮ್ಮ ದಾಂಪತ್ಯ ಜೀವನ ಚೆನ್ನಾಗಿಯೇ ನಡೆಯುತ್ತಿದೆ. ನನ್ನ ಹೆಂಡತಿ ಬೆಡ್ಡಿನಲ್ಲಿ ನನಗೆ ಎಲ್ಲ ರೀತಿಯ ಸಹಕಾರ ಕೊಟ್ಟರೂ ಉಳಿದಂತೆ ಅವಳು ಯಾವ ಕೆಲಸವನ್ನೂ ಸರಿಯಾಗಿ ಮಾಡುವುದಿಲ್ಲ. ಯಾವಾಗ ನೋಡಿದರೂ ಫೇಸ್‍ಬುಕ್ಕಿನಲ್ಲಿ ಚಾಟಿಂಗಿನಲ್ಲಿಯೋ ಇಲ್ಲಾ ಸೀರಿಯಲ್ ನೋಡ್ತಾನೋ ಕುಳಿತುಬಿಡುತ್ತಾಳೆ. ನನಗೀಗ ಅವಳ ತವರುಮನೆ ಇರುವ ಊರಿಗೇ ವರ್ಗವಾಗಿದೆ. ಸರಿಯಾದ ಮನೆಯೂ ಸಿಗದ ಕಾರಣ ಈಗ ನಾವು ಆಕೆಯ ಮನೆಯಲ್ಲಿಯೇ ಇದ್ದೇವೆ. ಮಾವನಿಗೆ ಬಿಸಿನೆಸ್ ಇರುವುದರಿಂದ ಅವರು ಬೇರೆ ಊರಿಗೆ ಹೋಗುತ್ತಿರುತ್ತಾರೆ. ನನ್ನ ಹೆಂಡತಿಯ ತಮ್ಮನೂ ಇಂಜಿನಿಯರಿಂಗ್ ಬೇರೆ ಕಡೆ ಮಾಡುತ್ತಿದ್ದಾನೆ. ಹಾಗೆ ಹೆಚ್ಚಾಗಿ ಅಲ್ಲಿ ಅತ್ತೆ ಒಬ್ಬರೇ ಇರುತ್ತಿರುವುದರಿಂದ ಅಲ್ಲಿಯೇ ಖಾಯಂ ಇರಲು ನಮಗೆ ಒತ್ತಾಯಿಸಿದ್ದಾರೆ. ನನಗೀಗ ನಿಜ ಅರ್ಥದಲ್ಲಿ ಮನೆ ಎಂದರೆ ಹೇಗಿರಬೇಕು ಅನ್ನುವ ಅರಿವಾಗುತ್ತಿದೆ. ನನ್ನ ಅತ್ತೆ ತುಂಬಾ ಅಪ್-ಟು-ಡೇಟ್. ನನ್ನ ಊಟೋಪಚಾರಗಳನ್ನು ನೋಡಿಕೊಂಡು ಬಟ್ಟೆಬರೆಗಳನ್ನು ಜೋಡಿಸಿಡುವ ಕೆಲಸವೂ ಅವರೇ ನೋಡಿಕೊಳ್ಳುವುದು. ಅವರು ನೋಡಲು ಸಹ ತೆಳ್ಳಗೆ ಬೆಳ್ಳಗಿದ್ದು ನನ್ನ ಹೆಂಡತಿಯ ಅಕ್ಕನ ಹಾಗೆ ಕಾಣಿಸುತ್ತಾರೆ. ಯಾವಾಗಲೂ ಎಲ್ಲರ ಜೊತೆ ನಗುತ್ತಾ ಮಾತಾಡಿಸುತ್ತಾ ಲವಲವಿಕೆಯಿಂದ ಓಡಾಡುತ್ತಿರುತ್ತಾರೆ. ನನಗೆ ಅವರ ಮೇಲೆ ಆಕರ್ಷಣೆ ಉಂಟಾಗಿದೆ. ಅವರ ಜೊತೆ ಮಾತಾಡುವುದು ನನಗಿಷ್ಟವಾಗುತ್ತಿದೆ. ನನ್ನ ಹೆಂಡತಿಗೂ ನಾನು ನನ್ನ ಅತ್ತೆ ಹತ್ತಿರ ಸಲುಗೆಯಿಂದ ಮಾತಾಡುತ್ತಿದ್ದರೆ ಅವಳೇನೂ ಅದನ್ನು ಇನ್ನುವರೆಗೆ ವಿರೋಧಿಸಿಲ್ಲ. ಅತ್ತಯೂ ಇಲ್ಲಿಯವರೆಗೆ ನನ್ನ ಬಳಿ ಜೋಕ್ಸ್ ಮಾಡಿಕೊಂಡೇ ಮಾತಾಡುತ್ತಾರೆ. ನನ್ನ ಮೇಲೆ ಅವರಿಗೂ ಮನಸ್ಸಿರಬಹುದೇ…  ನಾನು ಇದುವರೆಗೆ ಅವರ ಬಳಿ ಈ ವಿಷಯ ಹೇಳಿಲ್ಲ. ಅವರನ್ನು ಬಯಸಿದರೆ ಅದರಲ್ಲಿ ನನ್ನ ತಪ್ಪಿದೆಯಾ?

ಉ : ನಿನ್ನ ತಲೆ ಭುಜದ ಮೇಲೆಯೇ ಇದೆ ತಾನೇ? ಅಂತಹ ಕೆಟ್ಟ ಯೋಚನೆ ಕನಸಿನಲ್ಲಿಯೂ ಬರುವುದು ತಪ್ಪು. ಒಬ್ಬರನ್ನು ಇಷ್ಟಪಡುವುದಕ್ಕೂ ಬೇರೆ ರೀತಿಯಲ್ಲಿ ಬಯಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ಎಷ್ಟೋ ಜನರು (ಲಿಂಗ ತಾರತಮ್ಯವಿಲ್ಲದೇ) ನಮ್ಮ ಮನಸ್ಸಿಗೆ ಹತ್ತಿರವಾಗುತ್ತಾರೆ. ಹಾಗಂತ ಅವರನ್ನೆಲ್ಲ ಪಡೆಯಲು ಆಸೆ ಪಟ್ಟರೆ ಹೇಗೆ? ನಿಮ್ಮ ಅತ್ತೆ ನಿಮ್ಮನ್ನು ಮಗನ ಹಾಗೆ ಪ್ರೀತಿಸಬಹುದು. ಮಕ್ಕಳ ದೇಕ್‍ರೀಕ್ ಹೇಗೆ ನೋಡಿಕೊಳ್ಳುತ್ತಾರೋ ಹಾಗೇ ನಿಮ್ಮ ಬಗ್ಗೆಯೂ ಬೇಧವೆಣಿಸದೇ ನಿಮ್ಮ ಬೇಕುಬೇಡಗಳ ಬಗ್ಗೆ ಗಮನ ಹರಿಸುತ್ತಾರೆ. ನಿಮ್ಮ ತಾಯಿಯೂ ನಿಮ್ಮನ್ನು ಅದೇ ರೀತಿ ನೋಡಿಕೊಳ್ಳುತ್ತಿರಲಿಲ್ಲವೇ ಹಾಗೇ. ಮನಸ್ಸನ್ನು ಬೇಕೆಂದಲ್ಲಿ ಹರಿಯಬಿಡಲೂ ಒಂದು ಲಿಮಿಟ್ ಇದೆ. ನಿಮ್ಮ ಹೆಂಡತಿ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದರೆ ಅದು ನಿಮ್ಮ ಹಣೆಬರಹ. ಹಾಗಂತ ತಾಯಿ ಸ್ಥಾನದಲ್ಲಿರುವ ಅತ್ತೆಗೇ ಲೈನ್ ಹೊಡೆಯುತ್ತೀರಲ್ಲಾ … ಬುದ್ಧಿ ಇದೆಯಾ ನಿಮಗೆ? ನಿಮ್ಮ ಹೆಂಡತಿ ಸಹಜವಾಗಿ ಆಕೆ ಅಮ್ಮನ ಹತ್ತಿರ ನೀವು ಮಾತಾಡುತ್ತಿದ್ದೀರಿ ಎಂದು ಭಾವಿಸಿರಬಹುದು. ಅತ್ತೆಯೂ ಮಗಳ ಗಂಡ ಎನ್ನುವ ಸಲುಗೆಯಿಂದ ತಮಾಷೆಯಾಗಿ ಮಾತಾಡುತ್ತಿದ್ದಾರೆ ಅಷ್ಟೇ. ಈ ನಿಮ್ಮ ಕೆಟ್ಟ ಯೋಚನೆ ನಿಮ್ಮ ಹೆಂಡತಿ, ಅತ್ತೆ ಅಥವಾ ಮತ್ಯಾರಿಗಾದರೂ ಗೊತ್ತಾದರೆ ನಿಮಗೆ ಪೊರಕೆ ಸೇವೆ ಗ್ಯಾರಂಟಿ ಹುಷಾರು.