ಪ್ರೀತಿ ಒತ್ತಾಯದಿಂದ ಪಡೆಯುವ ಸರಕಲ್ಲ

ಪ್ರ : ಅವಳು ನನ್ನ ಅಮ್ಮನ ಅಣ್ಣನ ಮಗಳು. ನನಗಿಂತ ಎರಡು ವರ್ಷ ಚಿಕ್ಕವಳು. ನನಗೆ ಅದು ಅಜ್ಜನ ಮನೆಯಾದ್ದರಿಂದ ಪ್ರತೀ ರಜೆಗೆ ಅಲ್ಲಿಗೆ ಹೋಗುತ್ತಿದ್ದೆ. ನಾವಿಬ್ಬರೂ ಚಿಕ್ಕಂದಿನಿಂದಲೂ ಬಹಳ ಕ್ಲೋಸ್. ನಮ್ಮ ಕುಟುಂಬದವರೆಲ್ಲರೂ ನಮ್ಮ ಸ್ನೇಹ ನೋಡಿ ಕೀಟಲೆ ಮಾಡುತ್ತಿದ್ದರು. ಅವಳು ಮುಂದೆ ನನ್ನ ಬಾಳಸಂಗಾತಿಯಾಗುವವಳು ಅಂತಲೇ ನನ್ನ ಮನಸ್ಸಿನಲ್ಲಿ ತುಂಬಿಹೋಗಿತ್ತು.. ಪಿಯುಸಿ ಮುಗಿದ ಬಳಿಕ ಮುಂದಿನ ಓದಿಗೆ ನಾನು ಬೇರೆ ಊರಿಗೆ ಹೋಗಬೇಕಾಯ್ತು. ನನ್ನ ಓದಿನಲ್ಲಿಯೇ ಬ್ಯೂಸಿಯಾದ್ದರಿಂದ ಕೆಲವು ಸಮಯ ಅಜ್ಜನ ಮನೆಗೆ ಹೋಗಲಿಕ್ಕೇ ಆಗಿರಲಿಲ್ಲ. ನನ್ನ ಮಾವನ ಮಗಳ ಹತ್ತಿರ ಪರ್ಸನಲ್ ಮೊಬೈಲ್ ಇರಲಿಲ್ಲವಾದ್ದರಿಂದ ಅವಳ ಜೊತೆ ಫೋನಿನಲ್ಲೂ ಮಾತಾಡುವುದು ಕಡಿಮೆಯಾಗಿತ್ತು. ಆದರೂ ನನ್ನ ಮನಸ್ಸಿನ ತುಂಬಾ ಅವಳೇ ನೆಲೆಸಿದ್ದರಿಂದ ಕಾಲೇಜಿನಲ್ಲಿ ಕೆಲವು ಹುಡುಗಿಯರು ನನ್ನ ಹತ್ತಿರ ಬರಲು ಬಯಸಿದರೂ ಅವರ ಜೊತೆ ಅಂತರ ಕಾಪಾಡಿಕೊಂಡು ಬಂದಿದ್ದೇನೆ. ಆದರೆ ಅವಳಿಗೆ ಬೇರೆ ಬಾಯ್‍ಫ್ರೆಂಡ್ ಇದ್ದಾನೆ ಅಂತ ಕೆಲವು ದಿನಗಳ ಹಿಂದೆ ಅವಳ ಫೇಸ್‍ಬುಕ್ಕಿನ ಮೂಲಕ ತಿಳಿದು ತುಂಬಾ ನಿರಾಶೆಗೊಳಗಾಗಿದ್ದೇನೆ. ಅವಳು ಅವನ ಜೊತೆ ಫ್ರೀಯಾಗಿ ಸುತ್ತುತ್ತಿದ್ದಾಳೆ ಅನ್ನುವುದೂ ಅವಳ ಅಪ್‍ಡೇಟ್ಸ್‍ನಿಂದ ಗೊತ್ತಾಯಿತು. ನಮ್ಮಿಬ್ಬರಿಗೂ ಮದುವೆಯ ವಯಸ್ಸು ಬಂದಾಗ ಅವಳ ಜೊತೆಯೇ ನನ್ನ ಮದುವೆ ಮಾಡುತ್ತಾರೆ, ನಮ್ಮ ಪ್ರೀತಿ ಪವಿತ್ರವಾಗಿರಬೇಕು ಅಂತ ನಾನು ಯಾರ ಸ್ನೇಹವನ್ನೂ ಮಾಡದೇ ಅವಳ ಬಗ್ಗೆಯೇ ಕನಸಿನ ಗೋಪುರ ಕಟ್ಟಿಕೊಂಡು ಅದರಲ್ಲೇ ವಿಹರಿಸುತ್ತಿದ್ದೆ. ಆದರೆ ಅವಳ ಈ ನಡೆ ನನಗೆ ಶಾಕ್ ನೀಡಿಬಿಟ್ಟಿದೆ. ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡು `ನನ್ನ ಯಾಕೆ ದೂರ ಮಾಡಿದೆ?’ ಅಂತ ಚೀರಿ ಕೇಳಬೇಕೆಂದಿದ್ದೇನೆ. ನಿಮ್ಮ ಸಲಹೆ ಏನು?

: ನಿಮಗೆ ಹೇಗೆ ಅವಳ ಮೇಲೆ ಪ್ರೀತಿ ಇತ್ತೋ ಹಾಗೇ ಅವಳೂ ನಿಮ್ಮನೇ ಇಷ್ಟಪಡುತ್ತಿದ್ದಾಳೆ ಅಂತ ನೀವು ಭಾವಿಸಿಬಿಟ್ಟಿದ್ರಿ. ಆದರೆ ಚಿಕ್ಕಂದಿನಲ್ಲಿ ಇದ್ದ ಗೆಳೆತನವನ್ನೇ ಪ್ರೀತಿ ಅನ್ನಲು ಸಾಧ್ಯವಾ? ಬಾಲ್ಯದ ಹುಡುಗಾಟವೇ ಬೇರೆ, ಈಗ ಅವಳ ಇಷ್ಟಾನಿಷ್ಟ ಬೇರೆಯೂ ಇರಬಹುದಲ್ವಾ? ಅವಳು ಈಗ ತಾನೇ ವಯಸ್ಸಿಗೆ ಬಂದು ಜಗತ್ತನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದಾಳೆ. ಅವಳ ಆಸೆ ಗರಿಗೆದರುವಾಗ ನೀವು ಅವಳ ಜೊತೆಗೆ ಇರಲಿಲ್ಲ. ಈಗ ಅವಳ ಜಗತ್ತೇ ಬೇರೆ, ಅಲ್ಲಿಯ ಆಕರ್ಷಣೆಗಳೇ ಬೇರೆ. ಅಲ್ಲಿ ಆಕೆಗೆ ಅವಳ ಗೆಳೆಯರ ಬಳಗವೇ ಸರ್ವಸ್ವ. ಅಲ್ಲಿಯೇ ಯಾರೋ ಒಬ್ಬ ಹೃದಯಕ್ಕೆ ಹತ್ತಿರದವನೂ ಆಗಿ ಬಿಟ್ಟಿರಬಹುದು. ಆದರೂ ಆ ಟೀನೇಜ್ ಆಕರ್ಷಣೆಯನ್ನೇ ಲವ್ ಅಂತಲೂ ಹೇಳಲು ಬರುವುದಿಲ್ಲ. ನಿಮಗೆ ಇನ್ನೂ ನಿಜವಾಗಿ ಅವಳೇ ಬೇಕು ಅಂತ ಇದ್ದರೆ ಸಮಯ ವ್ಯರ್ಥ ಮಾಡದೇ ನಿಮ್ಮ ಮನಸ್ಸಿನ ಭಾವನೆಯನ್ನು ಅವಳಿಗೆ ತಿಳಿಸಿ. ಚಿಕ್ಕಂದಿನಿಂದಲೂ ನೀವು ಅವಳ ಬಗ್ಗೆ ಕನಸು ಕಂಡಿದ್ದನ್ನು ವಿವರಿಸಿ. ಆದರೆ ಅವಳು ಕೂಡಲೇ ಉತ್ತರಿಸುವಂತೆ ಅವಳಿಗೆ ಅವಸರ ಮಾಡದಿರಿ. ಅವಳಿಗೂ ಯೋಚಿಸಲು ಸಮಯ ಕೊಡಿ. ಬಾಲ್ಯದ ಒಡನಾಡಿ ಪ್ರೀತಿಸುತ್ತಿದ್ದಾನೆ ಅಂತ ಗೊತ್ತಾದ ಮೇಲೆ ಅವಳು ತನ್ನ ಕ್ಷಣಿಕ ಕ್ರಶ್‍ಗಳನ್ನೆಲ್ಲ ಬಿಟ್ಟು ನಿಮ್ಮ ಭಾವನೆಗೆ ಸ್ಪಂದಿಸಲೂಬಹುದು. ಆದರೆ ನಿಮ್ಮ ಮನಸ್ಸು ಅರಿತ ಮೇಲೂ ಅವಳಿಗೆ ನಿಮ್ಮ ಮೇಲೆ ಮಧುರ ಭಾವನೆಯೇ ಬರದಿದ್ದರೆ ನೀವು ಅವಳ ಪಾಡಿಗೆ ಅವಳನ್ನು ಬಿಡುವುದೇ ಒಳ್ಳೆಯದು. ಪ್ರೀತಿ ಒತ್ತಾಯದಿಂದ ಪಡೆಯುವ ಸರಕಲ್ಲ ತಾನೇ?