ಲಾರಿ ಚಾಲಕಗೆ ಚೂರಿ ಇರಿತ

ರಫೀಕ್

ಪತ್ನಿಯನ್ನು ಸ್ಥಳದಲ್ಲೇ
ಬಿಟ್ಟು ಆರೋಪಿ ಪರಾರಿ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಲಾರಿ ಚಾಲಕಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಮಂಜನಾಡಿ ಗ್ರಾ ಪಂ ವ್ಯಾಪ್ತಿಯ ಕಲ್ಕಟ್ಟ ಎಂಬಲ್ಲಿ ನಡೆದಿದೆ
ಕಲ್ಲರಕೋಡಿ ನಿವಾಸಿ ರಫೀಕ್  35  ಚೂರಿ ಇರಿತಕ್ಕೊಳಗಾಗಿದ್ದು, ಮದನಿ ನಗರದ ನಿವಾಸಿ ಹಂಝ ಎಂಬಾತ ಚೂರಿಯಿಂದ ತಿವಿದು ಪರಾರಿಯಾಗಿದ್ದಾನೆ  ಘಟನೆ ಸೋಮವಾರ ಮಧ್ಯಾಹ್ನದ ವೇಳೆಗೆ ನಡೆದಿದೆ
ನಾಟೆಕಲಿನಿಂದ ಮಂಜನಾಡಿ ಕಡೆಗೆ ತೆರಳುವ ಲಾರಿಯ ಹಿಂಭಾಗದಲ್ಲೇ ಹಂಝ ಪತ್ನಿ ಜತೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು  ಈ ವೇಳೆ ಧೂಳು ಎಬ್ಬಿಸಿದ ಎಂಬ ನೆಪದಲ್ಲಿ ಲಾರಿಯನ್ನು ಅಡ್ಡಗಟ್ಟಿದ ಹಂಝ  ಚಾಲಕ ರಫೀಕನನ್ನು ನಿಲ್ಲಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಂದರ್ಭ ಇಬ್ಬರ ನಡುವೆಯೂ ತೀವ್ರ ಮಾತಿನ ಚಕಮಕಿ ನಡೆದಿದೆ
ಈ ವೇಳೆ ಆಕ್ರೋಶಗೊಂಡ ಹಂಝ ಚಾಲಕಗೆ ಚೂರಿಯಿಂದ ಹೊಟ್ಟೆ ಭಾಗಕ್ಕೆ ಏಕಾಏಕಿ ಇರಿದಿದ್ದು, ಘಟನೆ ಬಳಿಕ ಆರೋಪಿ ಪತ್ನಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡಿರುವ ರಫೀಕನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ  ಅವರು ಇದೀಗ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ