ಒಬ್ಬನ ಸಾವಿಗೆ ಕಾರಣನಾದ ಲಾರಿ ಚಾಲಕಗೆ ಶಿಕ್ಷೆ

ಸಾಂದರ್ಭಿಕ ಚಿತ್ರ

ಭಟ್ಕಳ : ಕಳೆದ 2015ರಲ್ಲಿ ಮಾವಿನಕಟ್ಟೆಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಒಬ್ಬನ ಮರಣಕ್ಕೆ ಕಾರಣನಾಗಿದ್ದ ಲಾರಿ ಚಾಲಕ ಸಿದ್ದರಾಮ ದೊಂಢಿ ರಾಮನಗೂಳಿ ಈತನಿಗೆ 1 ವರ್ಷ 3 ತಿಂಗಳ ಸಜೆ ಹಾಗೂ 4 ಸಾವಿರ ರೂಪಾಯಿ ದಂಡ ವಿಧಿಸಿ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ.

ಭಟ್ಕಳದಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಲಾರಿ ಹಾಗೂ ಮುರ್ಡೇಶ್ವರ ಕಡೆಯಿಂದ ಶಿರಾಲಿ ಚಿತ್ರಾಪುರದ ಕಡೆಗೆ ಹೋಗುತ್ತಿದ್ದ ಬೈಕ್ ನಡುವೆ 2015ರಲ್ಲಿ ಡಿಕ್ಕಿ ಸಂಭವಿಸಿತ್ತು. ಡಿಕ್ಕಿಯಾದ ರಭಸಕ್ಕೆ ಶಿರಾಲಿಯ ಕಟ್ಟಿಗೆ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಹೊನ್ನಾವರ ಮಾಳ್ಕೋಡಿನವರಾದ ಬೈಕ್ ಸವಾರ ಗಜಾನನ ರಾವi ಗೌಡ (52) ತೀವ್ರ ಗಾಯಗೊಂಡು ಮೃತಪಟ್ಟಿದ್ದರು. ಲಾರಿಯ ಚಾಲಕ ಸಿದ್ದರಾಮ ದೊಂಢಿ ಈತನ ವಿರುದ್ಧ ಅಂದಿನ ಪೊಲೀಸ್ ವೃತ್ತ ನಿರೀಕ್ಷಕ ಪ್ರಶಾಂತ ನಾಯಕ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಹನುಮಂತರಾವ್ ಕುಲಕರ್ಣಿ ಅವರು ಆರೋಪಿ ಅಪಘಾತಪಡಿಸಿ ಒಬ್ಬನ ಮರಣಕ್ಕೆ ಕಾರಣವಾಗಿದ್ದರಿಂದ ಆತನಿಗೆ 1 ವರ್ಷ ಸಜೆ ಹಾಗೂ 3,000 ರೂ ದಂಡ, ಅತಿವೇಗದ ಚಾಲನೆಗೆ 3 ತಿಂಗಳು ಸಜೆ ಹಾಗೂ 1,000 ರೂ ವಿಧಿಸಿ ತೀರ್ಪು ನೀಡಿದ್ದಾರೆ