ಮನೆಯೊಳಗೆ ನುಗ್ಗಿದ ಲಾರಿ : ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಚಾಲಕನ ಬೇಜವಾಬ್ದಾರಿ, ನಿರ್ಲಕ್ಷ್ಯದ ಚಾಲನೆಯಿಂದ ಲಾರಿ  ಮನೆಯೊಳಗೆ ನುಗ್ಗಿದ ಘಟನೆ ತೊಕ್ಕೊಟ್ಟು ಸೇವಂತಿಗುಡ್ಡೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮಹಿಳೆಯೊಬ್ಬರು ಘಟನೆಯಿಂದ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೇವಂತಿಗುಡ್ಡೆಯ ರಾಜೇಂದ್ರ ಮನೆಗೆ ಲಾರಿ ನುಗ್ಗಿದ್ದು, ಪತ್ನಿ ಲಲಿತಾ (35)ಗೆ ಗಾಯವಾಗಿದ್ದು, ತೊಕ್ಕೊಟ್ಟು ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿ ನುಗ್ಗುತ್ತಿದ್ದ ವೇಳೆ ಮಕ್ಕಳಾದ ದೀಪಿಕಾ, ಯೋಗೀಶ್ ಹಾಗೂ ವೀರಮ್ಮ ನೆರೆಮನೆಯಲ್ಲಿದ್ದುದರಿಂದಾಗಿ ಅವರು ಪಾರಾಗಿದ್ದಾರೆ. ಪಕ್ಕದ ಮನೆಯ ಅಶ್ರಫ್ ಎಂಬವರ ಮನೆ ಕೆಲಸ ಮಾಡಲಾಗುತ್ತಿದ್ದು, ಈ ಸಂದರ್ಭ ಅಲ್ಲಿಗೆ ಮಣ್ಣು ಕೊಂಡು ಹೋಗಲೆಂದು ಬಂದಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಎದುರುಗಡೆ  ಇಳಿಜಾರು  ಪ್ರದೇಶದಲ್ಲಿದ್ದ ಮನೆಗೆ ನೇರವಾಗಿ ಬಂದು ಹಿಂಬದಿ ಗೋಡೆಗೆ ಡಿಕ್ಕಿ ಹೊಡೆದಿದೆ.

ಮನೆ  ಭಾಗಶಃ ಹಾನಿಗೀಡಾಗಿದ್ದು, ಅಡುಗೆ ಮನೆಯಲ್ಲಿದ್ದ ಸೊತ್ತು ನಜ್ಜುಗುಜ್ಜಾಗಿದೆ. ಹೆಂಚು ಸಂಪೂರ್ಣ ಪುಡಿಯಾಗಿ ಒಟ್ಟಾರೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಉಳ್ಳಾಲ ಪೆÇಲೀಸರು  ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದರು. ಸ್ಥಳಕ್ಕೆ ಉಳ್ಳಾಲ ನಗರಸಭೆ  ಪೌರಾಯುಕ್ತೆ  ವಾಣಿ ಆಳ್ವ, ಸ್ಥಳೀಯ ಕೌನ್ಸಿಲರ್ ಉಸ್ಮಾನ್ ಕಲ್ಲಾಪು ಸೇರಿದಂತೆ ಹಲವು ಮಂದಿ ಆಗಮಿಸಿದರು.