ಗಿನ್ನಿಸ್ ದಾಖಲೆ ಸೇರಿದ ಸುಧೀರ್ಘ ರಿಲೇ ಈಜು

ಗಿನ್ನಿಸ್ ದಾಖಲೆ ಮಾಡಿದ ತಂಡ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿಂಗ್ ಕಮಾಂಡರ್ ಪರಮವೀರ್ ಸಿಂಗ್ ನೇತೃತ್ವದಲ್ಲಿ, ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಹೊರಟಿದ್ದ ರಿಲೇ ಈಜುಗಾರರ ತಂಡ 1000 ಕಿಲೋ ಮೀಟರ್ ಪಯಣ ಪೂರೈಸಿ ಗುರುವಾರ ಮಧ್ಯಾಹ್ನ ತಣ್ಣೀರುಬಾವಿ ಬೀಚ್ ತಲುಪುತ್ತಿದ್ದಂತೆ, ಈ ಸುಧೀರ್ಘ ಮುಕ್ತ ಈಜು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಯಿತು.

ಮುಂಬೈ ದಾಳಿಯಲ್ಲಿ ಹುತಾತ್ಮರಾದವರ ಗೌರವಾರ್ಥ ನವೆಂಬರ್ 26ರಂದು ಹೊರಟ ಸಾಹಸಯಾತ್ರಿಗಳು ಅರಬ್ಬಿ ಸಮುದ್ರದಲ್ಲಿ ಗೋವಾ ಮೂಲಕ ಈಜಿಕೊಂಡು ಗಮ್ಯಸ್ಥಾನವನ್ನು ಸುರಕ್ಷಿತವಾಗಿ ಸೇರಿ `ಶತಮಾನದ ಈಜು’ ಗಿನ್ನಿಸ್ ದಾಖಲೆ ಸೇರಲು ಕಾರಣೀಕರ್ತರಾದರು.

ಈ ಹಿಂದಿನ ಎರಡು ವಿಶ್ವದಾಖಲೆಗಳನ್ನು ಸೀ ಹಾಕ್ಸ್ ಯಾತ್ರೆ ಮುರಿದಿದೆ. ಅಮೆರಿಕದ ನೈಟ್ ಟ್ರೈನ್ಸ್ 505 ಕಿಲೋಮೀಟರ್ ದೂರವನ್ನು ಆರು ಮಂದಿ ಈಜುಗಾರರು ಈಜಿದ್ದು ಈ ವರೆಗಿನ ದಾಖಲೆಯಾಗಿತ್ತು. ಇದುವರೆಗಿನ ಸುಧೀರ್ಘ ಮುಕ್ತ ಈಜು, 2009ರಲ್ಲಿ ದಾಖಲಾಗಿದ್ದು, 200 ಈಜುಗಾರರು 648.75 ಕಿಲೋ ಮೀಟರ್ ಈಜಿ ಈ ವಿಕ್ರಮ ಮೆರೆದಿದ್ದರು. ಸೀ ಹಾಕ್ಸ್ ತಂಡದ ಆರು ಮಂದಿ ಈಜುಗಾರರು ಈ ಹಿಂದೆ ತಮ್ಮದೇ ತಂಡ ನಿರ್ಮಿಸಿದ್ದ 433.11 ಕಿಲೋ ಮೀಟರ್ ದೂರದ ದಾಖಲೆಯನ್ನು ಪಣಜಿ ತಲುಪಿದ ವೇಳೆಗೆ ಮುರಿದಿತ್ತು. ಈ ತಂಡ ಪಣಜಿ ತಲುಪಿದಾಗ 548 ಕಿಲೋಮೀಟರ್ ಕ್ರಮಿಸಿದಂತಾಗಿತ್ತು.

“ಈ ಶತಮಾನದ ಈಜಿನ ಭಾಗವಾಗುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ. ಸೀ ಹಾಕ್ಸ್ ತಂಡದ ಈ ಅಮೋಘ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದೇನೆ” ಎಂದು ಪ್ರಾಯೋಜಕತ್ವ ವಹಿಸಿದ ಐಡಿಬಿಐ ಬ್ಯಾಂಕಿನ ಡಿಎಂಡಿ ಕೆ ಪಿ ನಾಯರ್ ಹೇಳಿದರು.

“ಈ ಹೊಸ ವಿಶ್ವದಾಖಲೆ, ಮುಂಬೈ ದಾಳಿಯಲ್ಲಿ ನಮ್ಮನ್ನು ಕಾಪಾಡುವ ಸಲುವಾಗಿ ಹುತಾತ್ಮರಾದ ಮತ್ತು ಅಪಾಯದ ಸ್ಥಿತಿಯಲ್ಲೂ ಅಮೋಘ ಕೆಚ್ಚನ್ನು ತೋರಿದ ಯೋಧರಿಗೆ ಸಮರ್ಪಿತವಾಗಿದೆ” ಎಂದು ಹೇಳಿದರು.