ಒಂಟಿತನ ಕಾಡುತ್ತಿದೆ ; ಮನೆಗೆ ಹಿಂತಿರುಗಲಾ?

ಚೇತನ

ಪ್ರ : ನಾನು ಮಲೆನಾಡಿನಿಂದ ಮಂಗಳೂರಿಗೆ ಕೆಲಸದ ನಿಮಿತ್ತ ಬಂದು ತಿಂಗಳ ಮೇಲಾಯಿತು. ನನಗೆ ಸಿಕ್ಕಿದ್ದು ಒಳ್ಳೆಯ ನೌಕರಿಯೇ. ನಮ್ಮ ಊರಿನಲ್ಲಿ ನನಗೆ ಉದ್ಯೋಗದ ಅವಕಾಶವೇ ಇರದ ಕಾರಣ ಈ ಊರಿಗೆ ಬರಬೇಕಾಯಿತು. ನನಗೆ ಇಲ್ಲಿ ಯಾರೂ ಅಷ್ಟಾಗಿ ಪರಿಚಯವಿಲ್ಲ. ಇಲ್ಲಿಯ ಜನರೆಲ್ಲರೂ ಮಾತಾಡುವ ತುಳು ನನಗೆ ಗೊತ್ತಿಲ್ಲ. ಎಲ್ಲ ಕಡೆಯೂ ಒಂಟಿತನ ಬಾಧಿಸುತ್ತಿದೆ. ಆಫೀಸಿನ ವಾತಾವರಣ ಚೆನ್ನಾಗಿದ್ದರೂ ಅವರು ನನ್ನನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಿಲ್ಲ. ಹೊರಗಡೆ ಹೊಟೇಲಿಗೆ ಹೋಗಲಿ, ಎಲ್ಲೇ ಹೋಗಲಿ ನನಗೆ ತುಳು ಬರದ ಕಾರಣ ಎಲ್ಲರೂ ನನ್ನನ್ನು ಬೇರೆಯೇ ರೀತಿ ಕಾಣುತ್ತಾರೆ. ಮನೆಯ ನೆನಪು ಕಾಡುತ್ತಿದೆ. ಅಮ್ಮ ಬೆಳಿಗ್ಗೆ ನೀಡುತ್ತಿದ್ದ ಬಿಸಿದೋಸೆ, ಅಪ್ಪನ ಒಟಗುಟ್ಟುವಿಕೆ, ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ನಡೆಯುತ್ತಿದ್ದ ಗೌಜಿ, ಆ ದಿನಗಳಲ್ಲಿ ತಯಾರಿಸುತ್ತಿದ್ದ ಹೋಳಿಗೆ, ತಂಗಿಯ ಜೊತೆಗಿನ ವಾಗ್ಯುದ್ಧ, ಕೇರಿಯವರನ್ನು ಕಟ್ಟಿಕೊಂಡು ಆಡುತ್ತಿದ್ದ ಕ್ರಿಕೆಟ್ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಒಮ್ಮೊಮ್ಮೆ ಇಲ್ಲಿ ಎಲ್ಲ ಬಿಟ್ಟು ಗಂಟುಮೂಟೆ ಕಟ್ಟಿಕೊಂಡು ವಾಪಾಸು ಊರಿಗೆ ಹೋಗಿಬಿಡಲಾ ಅಂತ ಅನಿಸುತ್ತಿದೆ. ಈಗ ಹೋಗಿಬಿಟ್ಟರೆ ಮುಂದೆ ನನ್ನ ಭವಿಷ್ಯದ ಗತಿಯೇನು ಅನ್ನುವ ಚಿಂತೆಯೂ ಕಾಡುತ್ತಿದೆ. ನಮಗಿರುವ ಚಿಕ್ಕ ತೋಟದಲ್ಲಿ ಈಗ ಆದಾಯವೂ ಹೆಚ್ಚಿಲ್ಲ. ಆದರೆ ನನ್ನ ಈ ಮನಸ್ಸಿಗೆ ಹೇಗೆ ಸಾಂತ್ವಾನ ಹೇಳಲಿ? 

: ಅಲ್ಲಾ ತಮ್ಮಾ, ಮಂಗಳೂರೇನು ಅಮೇರಿಕಾವಾ? ಹೆಚ್ಚೂ ಅಂದರೆ ಐದಾರು ತಾಸಿನ ಪ್ರಯಾಣವಿರಬಹುದು ನಿಮ್ಮ ಊರಿಗೆ. ಹಾಗಿರುವಾಗ ಎಲ್ಲೋ ಪರದೇಶಕ್ಕೆ ಬಂದಿರುವಂತೆ ಅಲವತ್ತುಕೊಳ್ಳುತ್ತಿದ್ದೀಯಲ್ಲಾ. ಜೀವನ ಅನ್ನುವುದು ನಿಂತ ನೀರಾದರೆ ಏನು ಚೆಂದ? ನೀನಿನ್ನೂ ಚಿಕ್ಕವನು. ನಿನ್ನ ಭವಿಷ್ಯದ ದೃಷ್ಟಿಯಿಂದ ನೀನೀಗ ಈ ಊರಿಗೆ ಬಂದು ನೌಕರಿ ಹಿಡಿದಿದ್ದು ಒಳ್ಳೆಯ ನಿರ್ಧಾರವೇ. ಬೇರೆ ಪರಿಸರಕ್ಕೆ ಹೋದ ಕೆಲವು ಸಮಯ ಈ ರೀತಿಯ ಭಾವನೆ ಹೆಚ್ಚಿನವರಿಗೆ ಬರುತ್ತದೆ. ಆದರೆ ಕರ್ತವ್ಯದ ದೃಷ್ಟಿಯಿಂದ ಅಂಥದ್ದರಿಂದೆಲ್ಲ ಹೊರಬರಲೇಬೇಕಾಗುತ್ತದೆ. ನಿನಗೆ ತುಳು ಗೊತ್ತಿಲ್ಲದಿದ್ದರೇನಂತೆ. ಇಲ್ಲಿಯವರಿಗೆ ಕನ್ನಡ ಗೊತ್ತಿದೆಯಲ್ಲ? ನೀನು ಇದೇ ರಾಜ್ಯದವನು ತಾನೇ. ಎಷ್ಟೋ ಜನ ಕನ್ನಡವೇ ಗೊತ್ತಿಲ್ಲದ ಬೇರೆ ರಾಜ್ಯದ ಜನರು ಇಲ್ಲಿ ಬಂದು ತಮ್ಮ ಭವಿಷ್ಯ ಕಂಡುಕೊಂಡು ಹಾಯಾಗಿದ್ದಾರೆ. ನೀನು ಎಲ್ಲರೊಂದಿಗೆ ಮುಕ್ತ ಮನಸ್ಸಿಂದ ಬೆರೆಯಲು ಮೊದಲು ಕಲಿ. ನಿನ್ನ  ಸ್ನೇಹೀ ಗುಣದಿಂದ ಎಲ್ಲರ ಮನಸ್ಸೂ ಗೆಲ್ಲು. ಬೇಜಾರು ಅನಿಸಿದರೆ ಸಂಜೆಯ ಹೊತ್ತು ಇಲ್ಲಿಯ ಪ್ರಶಾಂತ ಸಮುದ್ರದ ಕಿನಾರೆಯಲ್ಲೋ ಇಲ್ಲಾ ಗಿಜಿಗಿಜಿಗುಡುವ ಮಾಲ್‍ಗೋ ಹೋಗಿ ಸಮಯ ಕಳೆ. ತಿಂಗಳಿಗೊಮ್ಮೆ ಸಾಧ್ಯವಾದರೆ ಊರಿಗೆ ಹೋಗಿ ಬಾ. ಕೊನೆಕೊನೆಗೆ ನಿನಗೆ ಊರಿಗೆ ಹೋದರೇ ಬೇಸರ ಅನಿಸಬಹುದು, ಅಷ್ಟು ಅಡ್ಜೆಸ್ಟ್ ಆಗಿಬಿಡುತ್ತೀ ಈ ಊರಿಗೆ. 

 

LEAVE A REPLY