ಲಂಡನ್ : ಬಂಧನ ಮಲ್ಯಗೆ ಅನುಕೂಲವಾಗಬಹುದು

ಬೆಂಗಳೂರು : ಭಾರತದ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಹೊರಡಿಸಲಾಗಿದ್ದ ವಾರಂಟ್ ಅನುಸಾರ ಅವರನ್ನು ಬಂಧಿಸಿರುವ ಲಂಡನ್ನಿನ ಪೊಲೀಸರ ಕ್ರಮ ಮಲ್ಯ ಅವರಿಗೆ ಅನುಕೂಲಕರವಾಗುವ ಸಾಧ್ಯತೆಗಳಿವೆ. ಕಾನುನು ತಜ್ಞರ ಅನುಸಾರ ಈ ಬಂಧನದ ಪರಿಣಾಮ  ಭಾರತಕ್ಕೆ ಮಲ್ಯರನ್ನು ಹಸ್ತಾಂತರಿಸುವ ಕ್ರಮಕ್ಕೆ ಹಿನ್ನಡೆ ಉಂಟಾಗಬಹುದು. ಈಗ ಮಲ್ಯ ತಮ್ಮ ವಿರುದ್ಧ ಮೊಕದ್ದಮೆಯನ್ನು ಬ್ರಿಟನ್ನಿನ ನ್ಯಾಯವ್ಯವಸ್ಥೆಯ ವ್ಯಾಪ್ತಿಗೊಳಪಡಿಸುವ ಮೂಲಕ ಬ್ರಿಟನ್ನಿನ ನ್ಯಾಯಾಲಯಗಳ ಮೂಲಕವೇ ನ್ಯಾಯ ಪಡೆಯಲು ಹೋರಾಡಬಹುದು. ಮಲ್ಯರನ್ನು ವಿಚಾರಣೆಗೊಳಪಡಿಸುತ್ತಿರುವ ಪ್ರಾಥಮಿಕ ನ್ಯಾಯಾಲಯಕ್ಕೆ ಕೇವಲ ಸಲಹೆ ನೀಡುವ ಅಧಿಕಾರ ಇರುತ್ತದೆಯೇ ಹೊರತು ಭಾರತಕ್ಕೆ ಹಸ್ತಾಂತರಿಸುವ ಅಧಿಕಾರ ಇರುವುದಿಲ್ಲ. ಒಂದು ವೇಳೆ ನ್ಯಾಯಾಲಯ ಅಂತಿಮ ತೀರ್ಪು ನೀಡಿದರೂ ಭಾರತಕ್ಕೆ ಕರೆದೊಯ್ಯುವಂತೆ ಭಾರತ ಸರ್ಕಾರಕ್ಕೆ ಸಲಹೆ ನೀಡಬಹುದು. ಆಗ ಭಾರತ ಸರ್ಕಾರ ಮೇಲ್ಮನವಿ ಸಲ್ಲಿಸಿ ಮಲ್ಯರನ್ನು ಕರೆಸಿಕೊಳ್ಳಬೇಕಾಗುತ್ತದೆ. ಮಲ್ಯರಿಗೂ ಈ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವ ಅವಕಾಶ ಇರುತ್ತದೆ.

ಭಾರತ ಮತ್ತು ಬ್ರಿಟನ್ ನಡುವೆ 1995ರಲ್ಲಿ ಸಹಿ ಮಾಡಲಾದ ಒಡಂಬಡಿಕೆಗಳ ಅನುಸಾರ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ಸರ್ಕಾರ ನಿರಾಕರಿಸಲೂ ಅವಕಾಶವಿರುತ್ತದೆ. ಮಲ್ಯರ ವಿರುದ್ಧ ಬ್ರಿಟಿಷ್ ನ್ಯಾಯಾಲಯದಲ್ಲಿ ಭಾರತ ಸರ್ಕಾರ ಮಾಡಿರುವ ಆರೋಪಗಳು ಬ್ರಿಟನ್ ನ್ಯಾಯ ವ್ಯವಸ್ಥೆಯ ಅನುಸಾರವೂ ಅಪರಾಧ ಎಂದು ಪರಿಗಣಿಸಲ್ಪಟ್ಟರೆ ಮಾತ್ರವೇ ಭಾರತ ಮಲ್ಯರನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಲ್ಯರನ್ನು ಕಿಂಗ್ ಫಿಷರ್ ಪ್ರಕರಣದಲ್ಲಿ ವ್ಯಕ್ತಿಗತವಾಗಿ ಆರೋಪಿ ಎಂದು ಪರಿಗಣಿಸುವುದು ಬ್ರಿಟೀಷ್ ನ್ಯಾಯ ವ್ಯವಸ್ಥೆಯ ಅನುಸಾರ ತರವಲ್ಲ ಎಂದು ಮಲ್ಯರ ವಕೀಲರು ವಾದಿಸಲೂಬಹುದು. ಮಲ್ಯ ಪಡೆದಿರುವ ಸಾಲ ಸಾಂಸ್ಥಿಕ ಸಾಲದ ರೂಪದಲ್ಲಿದ್ದು ವ್ಯಕ್ತಿಗತವಾಗಿ ಅವರನ್ನು ಅಪರಾಧಿ ಎಂದು ಪರಿಗಣಿಸಲಾಗದು ಎಂದೂ ವಕೀಲರು ವಾದಿಸಬಹುದು.

ಭಾರತ ಮತ್ತು ಬ್ರಿಟನ್ ನಡುವಿನ ಒಡಂಬಡಿಕೆಗಳ ಅನುಸಾರ ಬ್ರಿಟನ್ನಿನ ನ್ಯಾಯಾಲಯಗಳು ಭಾರತ ಸರ್ಕಾರದಿಂದ ಇನ್ನೂ ಹೆಚ್ಚಿನ ಮಾಹಿತಿಗಾಗಿ ಆಗ್ರಹಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಪೂರ್ಣ ಪ್ರಮಾಣದ ಸಾಕ್ಷ್ಯಾಧಾರಗಳು ದೊರೆತ ನಂತರವೇ ಬ್ರಿಟನ್ನಿನ ನ್ಯಾಯಾಲಯ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿ ನೀಡಬಹುದು.  ಕಳೆದ ವರ್ಷ ಮಾರ್ಚ್ 2ರಂದು ಬ್ರಿಟನ್ನಿಗೆ ಪರಾರಿಯಾದ ಮಲ್ಯ ಭಾರತದ ವಿವಿಧ ಬ್ಯಾಂಕುಗಳಿಗೆ 9000 ಕೋಟಿ ರೂ ಸಾಲ ಪಾವತಿ ಮಾಡಬೇಕಿದ್ದು ಭಾರತದಿಂದ ಮಲ್ಯರನ್ನು ಹಸ್ತಾಂತರಿಸಲು ಒಟ್ಟು 16 ದೂರುಗಳನ್ನು ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಲಾಗಿದೆ.