ಬಗೆಹರಿಯದ ಲೋಕಾಯುಕ್ತ ವಿವಾದ

ನ್ಯಾ ವಿಶ್ವನಾಥ ಶೆಟ್ಟಿ

ಭ್ರಷ್ಟ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ವಿರುದ್ಧ ಲೋಕಾಯುಕ್ತ ಹೂಡಿರುವ ಮೊಕದ್ದಮೆಯಲ್ಲಿ ಶೆಟ್ಟಿಯವರ ಪುತ್ರ ಶಶಿಕಿರಣ್ ಶೆಟ್ಟಿ ಮೋಹನ್ ಪರ ವಾದಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ವಿಶೇಷ ವರದಿ

ಕರ್ನಾಟಕ ಲೋಕಾಯುಕ್ತ ಹುದ್ದೆಯ ಸುತ್ತ ಹಬ್ಬಿರುವ ವಿವಾದಕ್ಕೆ ತಾರ್ಕಿಕ ಅಂತ್ಯವೇ ಕಾಣುವಂತೆ ತೋರುತ್ತಿಲ್ಲ. ನ್ಯಾ ಸಂತೋಷ್ ಹೆಗ್ಡೆ ನಿವೃತ್ತರಾದ ನಂತರ ರಾಜ್ಯ ಲೋಕಾಯುಕ್ತ ಗೊಂದಲ, ವಿವಾದಗಳ ಗೂಡಾಗಿದ್ದು ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದೆ.

ನ್ಯಾ ಭಾಸ್ಕರ್ ರಾವ್ ಲೋಕಾಯುಕ್ತರಾಗಿದ್ದ ಅವಧಿಯಲ್ಲಿ ಸಂಸ್ಥೆಯ ಘನತೆ ತೀವ್ರ ಪೆಟ್ಟು ತಿಂದಿದ್ದು ಭಾಸ್ಕರ್ ರಾವ್ ರಾಜೀನಾಮೆ ನೀಡಬೇಕಾಯಿತು. ಇದಾದ ಒಂದು ವರ್ಷದ ನಂತರ ರಾಜ್ಯ ಸರ್ಕಾರ ಲೋಕಾಯುಕ್ತ ಹುದ್ದೆಗೆ ನ್ಯಾ ಪಿ ವಿಶ್ವನಾಥ ಶೆಟ್ಟಿಯವರನ್ನು ಶಿಫಾರಸು ಮಾಡಿದ್ದು ಈ ನೇಮಕಾತಿಯನ್ನೂ ರಾಜ್ಯಪಾಲರು ತಿರಸ್ಕರಿಸಿದ್ದಾರೆ.

ಸಂತೋಷ್ ಹೆಗ್ಡೆ ನಿವೃತ್ತರಾದ ನಂತರ ರಾಜ್ಯ ಲೋಕಾಯುಕ್ತ ಯಾವುದೋ ಒಂದು ವಿವಾದದಲ್ಲಿ ಸಿಲುಕುತ್ತಲೇ ಇದೆ. ಸಂತೋಷ್ ಹೆಗ್ಡೆ ನಿರ್ಗಮನದ ನಂತರ ಲೋಕಾಯುಕ್ತರಾಗಿ ನೇಮಕಗೊಂಡ ನ್ಯಾ ಶಿವರಾಜ್ ಪಾಟೀಲ್ ಆಗಸ್ಟ್ 2011ರಲ್ಲಿ ಅಧಿಕಾರ ವಹಿಸಿಕೊಂಡರೂ ಗೃಹ ನಿರ್ಮಾಣದಲ್ಲಿ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ರಾಜೀನಾಮೆ ನೀಡಬೇಕಾಯಿತು. ನಂತರ ಬಿಜೆಪಿ ಸರ್ಕಾರ ನ್ಯಾ ಬನ್ನೂರುಮಠ ಅವರನ್ನು ನೇಮಿಸಲು ಮುಂದಾಗಿತ್ತು. ಆದರೆ ರಾಜ್ಯಪಾಲ ಭಾರದ್ವಾಜ್ ಅರ್ಜಿಯನ್ನು ತಿರಸ್ಕರಿಸಿದ್ದರು. ಬನ್ನೂರುಮಠ ಸ್ವತಃ ಹಿಂದೆ ಸರಿದಿದ್ದರು. ದೀರ್ಘ ಕಾಲದ ನಂತರ 2013ರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನ್ಯಾ ವೈ ಭಾಸ್ಕರ್ ರಾವ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ನಂತರ ಪರಿಸ್ಥಿತಿ ಇನ್ನೂ ಬಿಗಡಾಯಿಸಿತ್ತು. ಹಣ ವಸೂಲಿ ದಂಧೆಯ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದ ಭಾಸ್ಕರ್ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು

ನಂತರ ಏರ್ಪಟ್ಟ ಅನಿಶ್ಚಿತತೆಯಲ್ಲಿ ಉಪ ಲೋಕಾಯುಕ್ತ ನ್ಯಾ ಸುಭಾಷ್ ಅಡಿ ವಿಶ್ವಾಸ ಮತವನ್ನು ಎದುರಿಸಿದರೂ ಹೈಕೋರ್ಟ್ ಸಮಿತಿಯ ವರದಿಯ ಆಧಾರದ ಮೇಲೆ ಸುಭಾಷ್ ನಿರಪರಾಧಿ ಎಂದು ಸಾಬೀತುಪಡಿಸಿದ್ದರು. ನಂತರ ನ್ಯಾ ಮಜಗೆ ಅವರ ನಿವೃತ್ತಿಯ ನಂತರ  ಮತ್ತೊಮ್ಮೆ ಉಪಲೋಕಾಯುಕ್ತರ ವಿವಾದ ಆರಂಭವಾಗಿತ್ತು. ಎರಡನೆ ಉಪಲೋಕಾಯುಕ್ತ ಹುದ್ದೆಗೆ ರಾಜ್ಯ ಸರ್ಕಾರ ನ್ಯಾ ಕೆ ಎಲ್ ಮಂಜುನಾಥ್ ಹೆಸರನ್ನು ಶಿಫಾರಸು ಮಾಡಿದ್ದರೂ ರಾಜ್ಯಪಾಲರು ತಿರಸ್ಕರಿಸಿದ್ದರು.

ಕಳೆದ ಡಿಸೆಂಬರಿನಿಂದ ಲೋಕಾಯುಕ್ತ ಸಂಸ್ಥೆ ಮುಖ್ಯಸ್ಥರಿಲ್ಲದೆ ಬಣಗುಟ್ಟುತ್ತಿದ್ದು ಸರ್ಕಾರ ಎಸ್ ಆರ್ ನಾಯಕ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ ನ್ಯಾ ನಾಯಕ್ ಅವರ ಹೆಸರನ್ನೂ ರಾಜ್ಯಪಾಲರು ತಿರಸ್ಕರಿಸಿದ್ದರು. ಸರ್ಕಾರದ ವರ್ತನೆಯಿಂದ ಬೇಸತ್ತ ನ್ಯಾ ವಿಕ್ರಂಜಿತ್ ಸೆನ್ ಸ್ವತಃ ತಮ್ಮ ಹೆಸರನ್ನು ಹಿಂಪಡೆದಿದ್ದರು.

ಈಗ ಅಂತಿಮವಾಗಿ ರಾಜ್ಯ ಸರ್ಕಾರ ನ್ಯಾ ವಿಶ್ವನಾಥ ಶೆಟ್ಟಿ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಿದೆ. ಆದರೆ ವಿಶ್ವನಾಥ ಶೆಟ್ಟಿಯವರ ಹೆಸರೂ ಸಹ ವಿವಾದಕ್ಕೊಳಗಾಗಿದೆ. ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಅವರು ಶೆಟ್ಟಿಯವರ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದು, ಬೆಂಗಳೂರಿನ ಗೃಹನಿರ್ಮಾಣ ಸಂಘದ ವತಿಯಿಂದ ನ್ಯಾ ವಿಶ್ವನಾಥ ಶೆಟ್ಟಿ ಹಲವು ಕಟ್ಟಡಗಳನ್ನು ಪಡೆದಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಆದರೆ ತಮ್ಮ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರವಾದದ್ದು ಎಂದು ನ್ಯಾ ಶೆಟ್ಟಿ ಹೇಳಿದ್ದಾರೆ. ಆದರೆ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ವಿರುದ್ಧ ಲೋಕಾಯುಕ್ತ ಹೂಡಿರುವ ಮೊಕದ್ದಮೆಯಲ್ಲಿ ಶೆಟ್ಟಿಯವರ ಪುತ್ರ ಶಶಿಕಿರಣ್ ಶೆಟ್ಟಿ ಮೋಹನ್ ಪರ ವಾದಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರ ಲೋಕಾಯುಕ್ತರನ್ನು ನೇಮಿಸುವ ಮುನ್ನ ತೀವ್ರ ಎಚ್ಚರ ವಹಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಸಲ್ಡಾನಾ ಹೇಳುತ್ತಾರೆ. ಲೋಕಾಯುಕ್ತ ಹುದ್ದೆಯನ್ನು ಅಲಂಕರಿಸುವವರು ತಮ್ಮ ನೈತಿಕತೆಯನ್ನು ಪ್ರದರ್ಶಿಸುವುದೇ ಅಲ್ಲದೆ ತಮ್ಮ ಕುಟುಂಬ ಸದಸ್ಯರಿಗೂ ಸಹ ಅವರ ಹೊಣೆಗಾರಿಕೆ ಮತ್ತು ನೈತಿಕತೆಯನ್ನು ತಿಳಿಸಬೇಕಾಗುತ್ತದೆ ಎಂದು ನ್ಯಾ ಸಲ್ಡಾನಾ ಹೇಳುತ್ತಾರೆ. ಲೋಕಾಯುಕ್ತರ ಬಗ್ಗೆ ಯಾರೂ ಸಹ ಬೆಟ್ಟು ಮಾಡಿ ತೋರಿಸುವಂತಹ ಪ್ರಮಾದ ಜರುಗದಂತೆ ಸರ್ಕಾರ ಎಚ್ಚರವಹಿಸಬೇಕು ಎಂದು ಸಲ್ಡಾನಾ ಹೇಳುತ್ತಾರೆ.

ನ್ಯಾ ವಿಶ್ವನಾಥ ಶೆಟ್ಟಿ ವಿರುದ್ಧ ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ಎಸ್ ಆರ್ ಹಿರೇಮಠ್ ಸರ್ಕಾರಕ್ಕೆ ಸಕಲ ದಾಖಲೆಗಳ ಸಮೇತ ಮಾಹಿತಿ ಒದಗಿಸಿದ್ದಾರೆ.  ಬಿಡಿಎ ನಿವೇಶನ ಪಡೆದಿರುವ ನ್ಯಾ ಶೆಟ್ಟಿ ಆರ್‍ಟಿ ನಗರದಲ್ಲಿ ಮನೆ ಕಟ್ಟಿದ್ದು ನ್ಯಾಯಾಂಗ ಬಡಾವಣೆಯಲ್ಲೂ ಮತ್ತೊಂದು ನಿವೇಶನ ಪಡೆದಿದ್ದಾರೆ ಎಂದು ಹಿರೇಮಠ್ ಆರೋಪಿಸಿದ್ದಾರೆ. ಮೇಲಾಗಿ ಗಣಿ ಧಣಿ ಜನಾರ್ಧನ ರೆಡ್ಡಿಯ ವಿರುದ್ಧ ಲೋಕಾಯುಕ್ತ ನ್ಯಾ ಸಂತೋಷ್ ಹೆಗ್ಡೆ ಕಾನೂನು ಸಮರ ಹೂಡಿದ್ದಾಗ ರೆಡ್ಡಿಯ ಪರವಾಗಿ ವಿಶ್ವನಾಥ ಶೆಟ್ಟಿ ವಾದ ಮಂಡಿಸಿದ್ದರು. ಹಾಗಾಗಿ ವಿಶ್ವನಾಥ ಶೆಟ್ಟಿಯವರನ್ನು ಲೋಕಾಯುಕ್ತರನ್ನಾಗಿ ನೇಮಿಸುವುದು ಹಿತಾಸಕ್ತಿಗಳ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ ಎಂದು ಹಿರೇಮಠ್ ಆರೋಪಿಸುತ್ತಾರೆ. ಅಷ್ಟೇ ಅಲ್ಲದೆ ನ್ಯಾ ಶೆಟ್ಟಿ ಹೊಂದಿರುವ ಖಾಸಗಿ ಆಸ್ತಿಯೂ ಸಹ  ವಿವಾದಾಸ್ಪದವಾಗಿದ್ದು ಈ ಕುರಿತು ತನಿಖೆ ನಡೆಯಬೇಕು ಎಂದು ಹಿರೇಮಠ್ ಆಗ್ರಹಿಸಿದ್ದಾರೆ.