ಲೋಕಾಯುಕ್ತ ಗೊಂದಲದ ಗೂಡಾಗಿರುವುದು ದುರದೃಷ್ಟ

ಕಳೆದ ಹದಿಮೂರು ತಿಂಗಳಿನಿಂದ ತೆರವಾಗಿದ್ದ ರಾಜ್ಯ ಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿಯವರ ಹೆಸರನ್ನು ಶಿಫಾರಸು ಮಾಡಿರುವ ಉನ್ನತಾಧಿಕಾರಿ ಆಯ್ಕೆ ಸಮಿತಿಯ ಸೂಕ್ತ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ದೂರದೃಷ್ಟಿಯ ಫಲದಿಂದಾಗಿ 32 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಲೋಕಾಯುಕ್ತ ಸಂಸ್ಥೆ ಹಲವಾರು ಮಜಲುಗಳನ್ನು ದಾಟಿ ಬಂದಿದೆ.
ಹಿಂದಿನ ಲೋಕಾಯುಕ್ತ ಭಾಸ್ಕರರಾವ್ ಅವರ ಅವಧಿಯಲ್ಲಂತೂ ಲೋಕಾಯುಕ್ತ ಸಂಸ್ಥೆಗೆ ದೊಡ್ಡ ಕಳಂಕವೇ ತಟ್ಟಿತು. ಈ ಮಧ್ಯೆ ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳವನ್ನು ಅಸ್ತಿತ್ವಕ್ಕೆ ತಂದ ರಾಜ್ಯ ಸರಕಾರ ಸಾಕಷ್ಟು ಟೀಕೆಗಳನ್ನೂ ಎದುರಿಸಬೇಕಾಯಿತು. 32 ವರ್ಷಗಳನ್ನು ಸುದೀರ್ಘ ಇತಿಹಾಸ ಹೊಂದಿದ್ದರೂ ಲೋಕಾಯುಕ್ತ ಸಂಸ್ಥೆ ಇನ್ನೂ ಗೊಂದಲದ ಗೂಡಾಗಿಯೇ ಮುಂದುವರಿದಿರುವುದು ದುರದೃಷ್ಟಕರ ಸಂಗತಿ.
ಇನ್ನು ಪ್ರತಿಬಾರಿ ಲೋಕಾಯುಕ್ತರ ನೇಮಕಾತಿಯ ಸಂದರ್ಭದಲ್ಲಿಯೂ ಅವರ ವಿರುದ್ಧ ಕೆಲವು ಹಿತಾಸಕ್ತಿಗಳು ಸುಳ್ಳು ಪ್ರಮಾಣ ಪತ್ರ ನೀಡಿ ನಿವೇಶನ ಪಡೆದ ಆರೋಪ ಹೊರಿಸುವುದು ಮಾಮೂಲಾಗಿಬಿಟ್ಟಿದೆ.
ವಿಶ್ವನಾಥ ಶೆಟ್ಟಿ ಅವರ ವಿರುದ್ಧವೂ ಇಂತಹುದೇ ಆರೋಪ ಮಾಡಲಾಗಿದ್ದರೂ ಸ್ವತಃ ಶೆಟ್ಟಿಯವರೇ ಈ ಆರೋಪ ನಿರಾಕರಿಸಿ ತಾವು ಸುಳ್ಳು ಪ್ರಮಾಣಪತ್ರ ನೀಡಿ ನ್ಯಾಯಾಂಗ ಬಡಾವಣೆಟಯಲ್ಲಿ ನಿವೇಶನ ಪಡೆದಿಲ್ಲ, ಇದೊಂದು ಸುಳ್ಳು ಆರೋಪವೆಂಬ ಸ್ಪಷ್ಟನೆ ನೀಡಿದ್ದಾರೆ. ಅವರ ಸ್ಪಷ್ಟನೆ ಒಪ್ಪಿ ರಾಜ್ಯಪಾಲರು ಅವರ ನೇಮಕಾತಿಗೆ ಹಸಿರು ನಿಶಾನೆ ತೋರುವರೋ ಅಥವಾ ಅಡ್ಡಗಾಲು ಹಾಕುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ರೀತಿಯ ಸಾಂವಿಧಾನಿಕ ನೇಮಕಾತಿಗಳಲ್ಲಿ ಅನಗತ್ಯ ಗೊಂದಲಗಳುಂಟಾಗುತ್ತಿರುವುದು ವಿಷಾದನೀಯವೇ ಸರಿ.
ಮನೋಹರ ಸುವರ್ಣ,

  • ಯೆಯ್ಯಾಡಿ ಮಂಗಳೂರು