ನಗರದ ಜಂಕ್ಷನ್ನಿನಿಂದ ಕುಡ್ಲ ಎಕ್ಸಪ್ರೆಸ್ ಆರಂಭಕ್ಕೆ ಸ್ಥಳೀಯರ ಅಸಮಾಧಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕುಡ್ಲ ಎಕ್ಸಪ್ರೆಸ್ (16575/16576) ಕ್ರಮವಾಗಿ ಎಪ್ರಿಲ್ 10 ಮತ್ತು 11ರಂದು ಕಾರ್ಯಾರಂಭಿಸಲು ಸಿದ್ಧವಾಗಿ ನಿಂತಿದ್ದು, ರೈಲು ಮಂಗಳೂರು ಸೆಂಟ್ರಲ್ಲಿನಿಂದ ಕಾರ್ಯಾರಂಭಿಸುವ ಬದಲು ಮಂಗಳೂರು ಜಂಕ್ಷನ್ನಿನಿಂದ ಓಡಾಟ ಆರಂಭಿಸಲಿದೆ ಎಂಬ ಮಾಹಿತಿ ಸ್ಥಳೀಯರಲ್ಲಿ ತೀವ್ರ ಅಸಮಾಧಾನವನ್ನು ಉಂಟು ಮಾಡಿದೆ.

ಕುಡ್ಲ ಎಕ್ಸಪ್ರೆಸ್ ರೈಲ್ವೇಯನ್ನು ಮಂಗಳೂರು ಸೆಂಟ್ರಲ್ಲಿನಿಂದ ಬೆಂಗಳೂರು ನಡುವೆ ಓಡಾಟಕ್ಕೆಂದು ರೈಲ್ವೇ ಸಚಿವ ಡೀವಿ ಸದಾನಂದ ಗೌಡರು ಮಂಡಿಸಿದ ಬಜೆಟಿನಲ್ಲಿ ಘೋಷಿಸಿದ್ದರು. ಆದರೆ ಮಂಗಳೂರು ಸೆಂಟ್ರಲ್ಲಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಉಲ್ಲೇಖಿಸಿದ ದಕ್ಷಿಣ ರೈಲ್ವೇಯು ಮಂಗಳೂರು ಜಂಕ್ಷನ್ನಿನಿಂದ ರೈಲು ಕಾರ್ಯಾರಂಭಿಸಲು ನಿರ್ಧರಿಸಿದೆ. ಮಂಗಳೂರು ಸೆಂಟ್ರಲ್ ದಕ್ಷಿಣ ರೈಲ್ವೇ ಅಧೀನದಲ್ಲಿ ಬರುತ್ತದೆ. ಹಾಗಾಗಿ ದಕ್ಷಿಣ ರೈಲ್ವೇಯು ವೇಳಾಪಟ್ಟಿ ಸಿದ್ಧಪಡಿಸುತ್ತದೆ. ಆದರೆ ಫ್ಲಾಟ್ ಫಾರ್ಮ್ ಮತ್ತು ನಿಲ್ಲುವ ಸ್ಥಳದ ಕೊರತೆಯಿದೆ ಎಂಬ ಕಾರಣದಿಂದ ನೈಋತ್ಯ ರೈಲ್ವೇಯು ಮಂಗಳೂರು ಜಂಕ್ಷನ್-ಬೆಂಗಳೂರು ಲೈನಿನ ಹೆಚ್ಚಿನ ರೈಲುಗಳನ್ನು ಬೆಂಗಳೂರು-ಹಾಸನ ರೈಲ್ವೇ ಮೂಲಕ ತ್ರಿಕೋನ ಸಾಪ್ತಾಹಿಕ ಓಡಾಟಕ್ಕೆ ಪ್ರಸ್ತಾವಿಸಿದೆ. ಇತ್ತೀಚೆಗೆ ಪ್ರಾರಂಭವಾಗಿರುವ ಬೆಂಗಳೂರು-ಹಾಸನ ಹೊಸ ರೈಲ್ವೇ ಮಾರ್ಗವು ಪ್ರಯಾಣದ ಅವಧಿಯನ್ನು ಕೂಡ ಕಡಿಮೆಗೊಳಿಸುತ್ತದೆ.

ಈ ನಿರ್ಧಾರಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಪ್ರಯಾಣಿಕರು ಮಂಗಳೂರು ಜಂಕ್ಷನ್ನಿಗೆ ತಲುಪಲು ಮತ್ತು ನಿರ್ಗಮಿಸಲು ರಿಕ್ಷಾಗಳನ್ನು ಹಿಡಿಯಬೇಕಾಗುತ್ತದೆ. ಇದರಿಂದ ಹಲವು ಅನಾನುಕೂಲತೆಗಳು ಎದುರಾಗುತ್ತವೆ ಎಂಬುದು ಪ್ರಯಾಣಿಕರ ಅಳಲು.