ಐತ್ತೂರು ಗ್ರಾ ಪಂ ಅಧ್ಯಕ್ಷರ ಅಕ್ರಮ ಭೂ ವ್ಯವಹಾರ ಸಂಬಂಧ ವಸೂಲಿಗೆ ಆದೇಶವಾದರೂ ಕ್ರಮ ಯಾಕಿಲ್ಲ

ಸಾಂದರ್ಭಿಕ ಚಿತ್ರ

ಸ್ಥಳೀಯರ ಪ್ರಶ್ನೆ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : “ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ ಎಂಬವರು ಭೂಮಿ ಖರೀದಿ ನಡೆಸಿದ ಸಂದರ್ಭದಲ್ಲಿ ಸರ್ಕಾರಕ್ಕೆ ವಂಚನೆ ಎಸಗಿರುವ ಪ್ರಕರಣ ಸಾಬೀತಾಗಿದ್ದು, ಈ ಬಗ್ಗೆ ರೂ 6,03,454 ಹಣವನ್ನು ವಸೂಲಿಗೆ ಅದೇಶವಾಗಿದ್ದರೂ ಈ ತನಕ ಕ್ರಮ ಕೈಗೊಂಡಿಲ್ಲ. ಇದರಲ್ಲಿ ಅಕಾರಿಗಳ ಕುಮ್ಮಕ್ಕು ಇದೆ” ಎಂದು ಸ್ಥಳೀಯ ಸಂಘಟನೆಗಳ ಮುಂದಾಳುಗಳು ಆರೋಪಿಸಿದ್ದಾರೆ.

ಕಡಬ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋ ಹೋರಾಟ ಸಮಿತಿ ಅಧ್ಯಕ್ಷ ಅಫ್ಸಾನ್ ಎ, ಪುತ್ತೂರು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ರಾಮಣ್ಣ ರೈ, ಐತ್ತೂರು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಶೇಷಪ್ಪ ಗೌಡ ಮೇಪತ್ತಪಾಲು ಮಾಧ್ಯಮದ ಜೊತೆ ಮಾತನಾಡಿ,  ತಕ್ಷಣವೇ ಸರ್ಕಾರಕ್ಕೆ ವಂಚನೆ ಮಾಡಿರುವ ಹಣವನ್ನು ವಸೂಲಿ ಮಾಡಬೇಕು” ಎಂದು ಒತ್ತಾಯಿಸಿದರು.

“ಪಂಚಾಯತ್ ಅಧ್ಯಕ್ಷ ಸತೀಶ್ ಅವರು 20-4-2012ರಂದು ಭೂಮಿಯನ್ನು ರೂ 31.90 ಲಕ್ಷಕ್ಕೆ ಖರೀದಿ ಒಪ್ಪಂದ ಮಾಡಿಕೊಂಡಿದ್ದು, ಅದೇ ಭೂಮಿಯನ್ನು ತನ್ನ ತಾಯಿ ವಲ್ಸಕ್ಕ ಎಂಬವರ ಹೆಸರಿಗೆ ಕೇವಲ ರೂ 6.33 ಲಕ್ಷಕ್ಕೆ ಕ್ರಯಚೀಟಿ ಮಾಡಿ ಸರ್ಕಾರಕ್ಕೆ 1,75 ಲಕ್ಷ ವಂಚನೆ ಎಸಗಿದ್ದರು. ಈ ಬಗ್ಗೆ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಕೆ ಪಿ ಮೋಹನ್ ಎಂಬವರು 29-7-2015ಕ್ಕೆ ಮಂಗಳೂರು ಜಿಲ್ಲಾ ನೋಂದಣಾಕಾರಿಗಳಿಗೆ ದೂರು ನೀಡಿದ್ದರು. ದೂರನ್ನು ಪರಿಶೀಲಿಸಿದ ಜಿಲ್ಲಾ ನೋಂದಣಾಕಾರಿಗಳು ಕರ್ನಾಟಕ ಮುದ್ರಾಂಕ ಕಾಯಿದೆ 1957ರ ಕಲಂ 45(ಎ)(2) ಮತ್ತು ನೋಂದಣಿ ಕಾಯಿದೆ 1908ರ ಕಲಂ 80ರ ಅಡಿಯಲ್ಲಿ ಮುಂದ್ರಾಂಕ ಶುಲ್ಕ, ದಂಡ ಶುಲ್ಕ ಮತ್ತು ನೋಂದಣಿ ಶುಲ್ಕವಾಗಿ ರೂ 6,03,454 ಪಾವತಿಸುವಂತೆ, ತಪ್ಪಿದಲ್ಲಿ ಕಂದಾಯ ಬಾಕಿ ಎಂದು ಪರಿಗಣಿಸಿ ಕಾನೂನು ಪ್ರಕಾರ ಸತೀಶ್ ವಿರುದ್ದ ಕ್ರಮ ಕೈಗೊಳ್ಳುವಂತೆ 16-11-2016ರಲ್ಲಿ ಆದೇಶ ನೀಡಿದ್ದಾರೆ. ಆದರೆ ಈ ತನಕ ಆದೇಶದ ಪಾಲನೆಯಾಗಿಲ್ಲ ಎಂದು ಆರೋಪಿಸಿ ಅವರು ತಕ್ಷಣವೇ ವಸೂಲಿಗೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.