ಸಾರ್ವಜನಿಕ ರಸ್ತೆ ಮುಚ್ಚುವ ಭೀತಿ

ಸ್ಥಳೀಯರ ಪ್ರತಿಭಟನೆ

ಮಂಜೇಶ್ವರ : ಮಂಜೇಶ್ವರ ಗ್ರಾ ಪಂ ಹೊಸಬೆಟ್ಟು ಗ್ರಾಮದ ವಾರ್ಡ್ ನಂಬ್ರ 9ರ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ಕಾಲೊನಿಯಿಂದ ಆದರ್ಶ ನಗರವನ್ನು ಸಂಪರ್ಕಿಸುವ ಸುಮಾರು ಒಂದೂವರೆ ಕಿಲೋ ಮೀಟರ್ ಅಂತರದ ಸಾರ್ವಜನಿಕ ರಸ್ತೆಯನ್ನು ಮುಚ್ಚುವ ಭೀತಿಯನ್ನು ಈ ಪ್ರದೇಶದ ನಾಗರಿಕರು ಎದುರಿಸುತ್ತಿದ್ದಾರೆ.

ಇದನ್ನು ಪ್ರತಿಭಟಿಸಿ ಸ್ಥಳೀಯ ನಾಗರಿಕರು ಸೋಮವಾರದಂದು ಬೆಳಿಗ್ಗೆ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಭೂ ದಾಖಲೆ ಸರ್ವೆ ಪ್ರಕಾರ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಜಮೀನಿಗೆ ಒಳಪಟ್ಟ ಸ್ಥಳದಲ್ಲಿ ಈ ರಸ್ತೆ ಹಾದು ಹೋಗುತ್ತಿರುವ ಕಾರಣ ಸರಕಾರಿ ಸೊತ್ತನ್ನು  ಸಂರಕ್ಷಿಸಬೇಕಾದ ಅನಿವಾರ್ಯದಿಂದ ಈ ಜಮೀನಿನಲ್ಲಿ ರಸ್ತೆ ಹಾದುಹೋಗಲು ಅನುಮತಿ ಇಲ್ಲದೇ ಇರುವುದರಿಂದ ಈ ರಸ್ತೆಗೆ ಶಾಶ್ವತ ಗೋಡೆ ಕಟ್ಟಿ ಮುಚ್ಚುವ ತಯಾರಿಗೆ ಅಧಿಕೃತರು ತಯಾರಿ ನಡೆಸುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಈ ಪ್ರದೇಶದ ನಾಗರಿಕರ ಗ್ರಹಿಕೆಯ ಪ್ರಕಾರ ಸುಮಾರು 100 ವರ್ಷಗಳ ಹಿಂದೆಯೇ ಈ ರಸ್ತೆಯಿದ್ದು, ಜಿಲ್ಲಾ ಪಂ, ಬ್ಲಾಕ್ ಪಂ ಹಾಗೂ ಗ್ರಾ ಪಂ ಈ ರಸ್ತೆಯ ಡಾಮರೀಕರಣಕ್ಕೆ ಹಾಗೂ ರಸ್ತೆಯ ಅಭಿವೃದ್ಧಿಗಾಗಿ ವಿವಿಧ ಇಲಾಖಾ ನಿಧಿಯನ್ನು ಬಳಸಲಾಗಿದೆ. ಇದಲ್ಲದೆ ಈ ರಸ್ತೆ ಹಾದು ಹೋಗುವ ಬದಿಯಲ್ಲಿ ಮಳೆ ನೀರು ಸಂಗ್ರಹಕ್ಕೆ ಶಾಶ್ವತ ತಡೆಗೋಡೆ ಕಟ್ಟಿ ಬಂಡ್ ನಿರ್ಮಿಸಲಾಗಿದೆ.

ಈ ರಸ್ತೆಯನ್ನು ಮುಚ್ಚಿದರೆ ಈ ಪ್ರದೇಶದ ನಾಗರಿಕರಿಗೆ ತಮ್ಮ ವಾಸ ಸ್ಥಳಕ್ಕೆ ಹೋಗಲು ಹಾಗೂ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಮಾತ್ರವಲ್ಲದೆ ಹೆಣವನ್ನು ಕೂಡಾ ಸಾಗಿಸಲು ದಾರಿ ಇಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಉಳಿಸಲು ಇಲ್ಲಿಯ ನಾಗರಿಕರು ಒಕ್ಕೊರಳಿನಿಂದ ಹೋರಾಟಕ್ಕಿಳಿದಿದ್ದಾರೆ.

ಸಂಬಂಧಪಟ್ಟವರು ರಸ್ತೆ ಮುಚ್ಚುಗಡೆ ಯೋಜನೆಯಿಂದ ಹಿಂದೆ ಸರಿಯದೇ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರತೆಯನ್ನು ಹೆಚ್ಚಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.