ಉಡುಪಿ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸರ್ಕಾರಿ ಬಸ್ ಓಡಾಟಕ್ಕೆ ಸ್ಥಳೀಯರಿಂದ ಬೇಡಿಕೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬುಧವಾರ ಸಂಘಟಿಸಿದ್ದ ಪ್ರಥಮ ಸಾರಿಗೆ ಅದಾಲತ್ ಸಭೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸರ್ಕಾರಿ ಬಸ್ ಸೇವೆ ಕಲ್ಪಿಸಬೇಕು ಎಂದು ಜನರಿಂದ ಭಾರೀ ಬೇಡಿಕೆ ಕೇಳಿಬಂದಿದೆ.

ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ ಯೋಜನೆಯಡಿಯಲ್ಲಿ ಉಡುಪಿ ನಗರಕ್ಕೆ 30 ಲೋ ಫ್ಲೋರ್ ಬಸ್ಸುಗಳ ಓಡಾಟಕ್ಕೆ ಅನುಮತಿ ನೀಡಲಾಗಿದ್ದರೂ ಕೇವಲ 12 ಬಸ್ಸುಗಳು ಮಾತ್ರ ಕಾರ್ಯಾಚರಿಸುತ್ತಿವೆ ಎಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಉಳಿದ ಬಸ್ಸುಗಳಿಗೆ ಆರ್ಟಿಒ ಇನ್ನೂ ವೇಳಾಪಟ್ಟಿ ಜಾರಿಗೊಳಿಸಿಲ್ಲ, ವಿದ್ಯಾರ್ಥಿಗಳ ಬೇಡಿಕೆಗಳಿಗೆ ಪ್ರಾಮುಖ್ಯತೆ ನೀಡಿ ಸೂಕ್ತ ರೂಟ್ ಗುರುತಿಸಬೇಕು ಎಂದು ಮಧ್ವರಾಜ್ ಸೂಚಿಸಿದರು.

ಉಡುಪಿ ರಸ್ತೆಗಳ ಪರಿಸ್ಥಿತಿ ಉತ್ತಮವಾಗಿದೆ. ಖಾಸಗಿ ವಲಯದ ಬಸ್ಸುಗಳನ್ನು ಅಥವಾ ಸರ್ಕಾರಿ ಬಸ್ಸುಗಳನ್ನು ಉತ್ತೇಜಿಸುವುದು ಅಥವಾ ವಿರೋಧಿಸುವುದು ಸರ್ಕಾರದ ಅಥವಾ ಆರ್ಟಿಒ ಕೆಲಸವಲ್ಲ. ಎರಡೂ ವಲಯದ ಬಸ್ಸುಗಳು ಒಟ್ಟಾಗಿ ಕಾರ್ಯಾಚರಿಸಬಹುದು. ಆದರೆ ಉಡುಪಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸರ್ಕಾರಿ ಬಸ್ಸುಗಳಿಗೆ ಬೇಡಿಕೆಗಳು ಕೇಳಿಬಂದಿವೆ ಎಂದ ಅವರು, ಈ ಸಂದರ್ಭದಲ್ಲಿ ಸುಮಾರು 47 ಅರ್ಜಿಗಳನ್ನು ಕೆಸ್ಸಾರ್ಟಿಸಿ ಅಧಿಕಾರಿಗಳ ಮುಂದಿಟ್ಟರು.

ನಕ್ಸಲ್ ಪೀಡಿತ ಪ್ರದೇಶ ನಡ್ಪಾಲ್ ಮತ್ತು ಸೋಮೇಶ್ವರ ಗ್ರಾಮಗಳು ಕಳೆದ 17 ವರ್ಷಗಳಿಂದ ಕೆಸ್ಸಾರ್ಟಿಸಿ ಬಸ್ಸುಗಳಿಗಾಗಿ ಬೇಡಿಕೆ ಇಡುತ್ತಾ ಬಂದಿದೆ. ಆದರೆ ಇದುವರೆಗೆ ಸ್ಪಂದನೆ ದೊರೆತಿಲ್ಲ ಎಂದು ಆ ಪ್ರದೇಶದ ನಿವಾಸಿ ಸದಾಶಿವ ದೂರುತ್ತಿದ್ದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪ್ರಮೋದ್ ಮಧ್ವರಾಜ್ ಕೆಸ್ಸಾರ್ಟಿಸಿ ಅಧಿಕಾರಿಗಳಿಗೆ ನಿರ್ದೇಶಿಸಿದರು.