ವರ್ಷಗಳಿಂದ ಮಲಿನವಾಗಿದ್ದ ಕೇರಳ ವಾಟರ್ ಆಥಾರಿಟಿ ಟ್ಯಾಂಕ್ ಊರವರಿಂದ ಶುಚೀಕರಣ

ಕೊಳಕು ನೀರನ್ನು ಹೊರ ಬಿಡುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕೇರಳ ನೀರು ಸರಬರಾಜು ಇಲಾಖೆಯ ವತಿಯಿಂದ ನಿರ್ಮಿಸಲಾದ ನೀರನ್ನು ಶೇಖರಣೆ ಮಾಡಿ ಸುಮಾರು 1400 ಕುಟುಂಬಕ್ಕೆ ವಿತರಿಸಲಾಗುತ್ತಿರುವ ಕುಂಜತ್ತೂರು ಹೈಯರ್ ಸೆಕಂಡರಿ ಶಾಲಾ ಸಮೀಪದಲ್ಲಿ ನಿರ್ಮಿಸಲಾಗಿದ್ದ  ನೀರಿನ ಟ್ಯಾಂಕ್ ಶುಚಿತ್ವ ಕಾಣದೇ ವರ್ಷಗಳೇ ಕಳೆದಿದ್ದರೂ ಈ ಬಗ್ಗೆ ಮುತುವರ್ಜಿ ವಹಿಸಿ ಶುಚಿತ್ವವವನ್ನು ಕಾಪಾಡಬೇಕಾದ ವಾಟರ್ ಆಥಾರಿಟಿ ಇಲಾಖಾ ಅಧಿಕಾರಿಗಳು ಹಾಗು ವಾರ್ಡ್ ಸದಸ್ಯೆ ಈ ಕಡೆ ತಿರುಗಿಯೂ ನೋಡದ ಹಿನ್ನೆಲೆಯುಲ್ಲಿ ಇದಕ್ಕೆ ಬೇಕಾದ ಹಣವನ್ನು ಊರವರಿಂದಲೇ ಸಂಗ್ರಹಿಸಿ ಟ್ಯಾಂಕನ್ನು ಶುಚಿಗೊಳಿಸಲಾಯಿತು.

mjr1-tank-clean1

ಟ್ಯಾಂಕಿಗೆ ಬೇಕಾದ ಸರಿಯಾದ ಮುಚ್ಚಳ ಇಲ್ಲದ ಕಾರಣ ಪಕ್ಷಿಗಳು ನೀರು ಕುಡಿಯಲು ಬಂದು ಕೆಲವೊಂದು ಅದರಲ್ಲೇ ಸತ್ತುಬಿದ್ದಿರುವ ದೃಶ್ಯ ಕೂಡಾ ಈ ಮೊದಲು ಕಂಡುಬಂದಿತ್ತು. ಆ ಸಂದರ್ಭ  ಈ ವಿಷಯವನ್ನು ಪರಿಸರವಾಸಿಗಳು ಅಧಿಕಾರಿಗಳ ಗಮನಕ್ಕೆ ತಂದಾಗ ತಾತ್ಕಾಲಿಕವಾದ ಒಂದು ಮುಚ್ಚಳವನ್ನು ಹಾಕಿ ಕೈತೊಳದಿದ್ದರು. ಅದು ಒಂದು ತಿಂಗಳು ಕೂಡಾ ಉಳಿದಿರಲಿಲ್ಲ.  ಬಳಿಕ ಮುಚ್ಚಳವಿಲ್ಲದ ಕಾರಣ ತ್ಯಾಜ್ಯಗಳು ತುಂಬಿದ ನೀರನ್ನು ಊರವರು ಕುಡಿಯಬೇಕಾದ ದುಃಸ್ಥಿತಿ ಬಂದೊದಗಿರುವ ಹಿನ್ನೆಲೆಯಲ್ಲಿ ಇದೀಗ ಊರವರಿಂದ ಸಂಗ್ರಹವಾದ ಹಣದಿಂದಲೇ ಇದಕ್ಕೊಂದು ಮುಚ್ಚಳವನ್ನು ಕೂಡಾ ಅಳವಡಿಸಲಾಗುತ್ತಿದೆ.

ಶನಿವಾರದಂದು ಟ್ಯಾಂಕ್ ಶುಚಿತ್ವಗೊಳಿಸುತ್ತಿರುವಾಗ ತ್ಯಾಜ್ಯ ನೀರು ತುಂಬಿಕೊಂಡದ್ದನ್ನು ಹೊರ ತೆಗೆಯಲಾಯಿತು. ಒಂದು ತಿಂಗಳಿನ ಹಣ ಪಾವತಿಸಲು ತಡವಾದರೆ ಕೂಡಲೇ ನೀರಿನ ಸಂಪರ್ಕವನ್ನು ಕಡಿತಗೊಳಿಸುವ ವಾಟರ್ ಅಥಾರಿಟಿ ಅಧಿಕಾರಿಗಳು ಬಿಲ್ ಪಾವತಿಸುವ ಗ್ರಾಹಕರ ನೀರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲವೆಂಬ ಆರೋಪ ನಿವಾಸಿಗಳಿಂದ ಕೇಳಿಬರುತ್ತಿದೆ.