ಎತ್ತಿನಬೈಲ್ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕೈ ಬಿಡಲು ಸ್ಥಳೀಯರ ಒತ್ತಾಯ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಕುಮಟಾ ಪುರಸಭೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕವನ್ನು ಮಿರ್ಜಾನ ಎತ್ತಿನಬೈಲ್ ಅರಣ್ಯ ಪ್ರದೇಶದಲ್ಲಿ ಸ್ಥಾಪಿಸಲು ಸ್ಥಳೀಯರ ತೀವ್ರ ವಿರೋಧವಿದ್ದು, ಉದ್ದೇಶಿತ ಯೋಜನೆಯನ್ನು ಕೂಡಲೇ ಕೈ ಬಿಡುವಂತೆ ಒತ್ತಾಯಿಸಿ ಮಿರ್ಜಾನ ಗ್ರಾಮ ಪಂಚಾಯತ ಸದಸ್ಯರು ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.

ಕುಮಟಾ ತಾಲೂಕಿನ ಎತ್ತಿನಬೈಲ್ ಗ್ರಾಮದ ಸರ್ವೆ ನಂ 31ರ 04 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಕುಮಟಾ ಪುರಸಭೆಯ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸುವ ಬಗ್ಗೆ ಗ್ರಾ ಪಂ.ಗೆ ಪತ್ರ ಬರೆದಿತ್ತು. ಈ ಸಂಬಂಧ ಗ್ರಾ ಪಂ.ನಲ್ಲಿ ತುರ್ತುಸಭೆ ಕರೆದಾಗ ಈ ಭಾಗದ ಎಲ್ಲ ಜನಪ್ರತಿನಿಧಿಗಳು ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸುವುದರಿಂದ ಇಲ್ಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎಂದ ಒಟ್ಟು 41ಕ್ಕೂ ಹೆಚ್ಚು ಜನರು ವಿರೋಧ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ.

ರಾಮತಳಿ ಬಳಿ ಇರುವ ಕೆರೆಗೆ ಘನತ್ಯಾಜ್ಯ ವಿಲೇವಾರಿ ಘಟಕದ ಮಲೀನ ನೀರು ಸೇರಿಕೊಂಡು ನೀರು ಕಲುಷಿತಗೊಳ್ಳಲಿದೆ. ಅಲ್ಲದೆ 100 ಮೀಟರ್ ವ್ಯಾಪ್ತಿಯಲ್ಲಿ ಕೊಂಕಣ ರೈಲ್ವೇ ನಿಲ್ದಾಣ ಪ್ರಾರಂಭಿಸಲು ಶಂಕುಸ್ಥಾಪನೆ ಮಾಡಿದ್ದು, ಅದಕ್ಕೂ ತೊಂದರೆಯಾಲಿದೆ. ಉದ್ದೇಶಿತ ಘಟಕ ಪ್ರಾರಂಭಕ್ಕೆ ಗ್ರಾ ಪಂ ಸಭೆಯಲ್ಲದೇ, ಸಾರ್ವಜನಿಕರ ಸಭೆಯಲ್ಲಿಯೂ ತೀವ್ರ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ವಿರೋಧದ ನಡುವೆಯೂ ಘನತ್ಯಾಜ್ಯ ಘಟಕ ಪ್ರಾರಂಭಿಸಲು ಮುಂದಾದಲ್ಲಿ ಗ್ರಾಮಸ್ಥರಿಂದ ಉಗ್ರ ಹೋರಾಟ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.