ಲಕ್ಷದ್ವೀಪಕ್ಕೆ ರವಾನೆಯಾಗುತ್ತಿದೆ ಲೋಡುಗಟ್ಟಲೆ ಜಲ್ಲಿ, ಮರಳು

ನಗರದಲ್ಲಿ ಮರಳು ಕೊರತೆ ಇದ್ದರೂ ಅಲ್ಲಿಗೆ ಅವ್ಯಾಹತ ರವಾನೆ

ಮಂಗಳೂರು : ರಾಜ್ಯದಲ್ಲಿ ಮರಳು, ಜಲ್ಲಿ ಕಲ್ಲಿಗೆ ತೀವ್ರ ಅಭಾವವಿದೆ. ನಗರದಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲಾಗಿದೆ. ಆದರೆ ನಗರದಿಂದ ಲಕ್ಷದ್ವೀಪಕ್ಕೆ ಮಂಗಳೂರು ಹಳೇ ಬಂದರು ಮೂಲಕ ಕೋಟ್ಯಂತರ ರೂ ಮೌಲ್ಯದ ಮರಳು ಮತ್ತು ಜಲ್ಲಿ ಅವ್ಯಾಹತವಾಗಿ ರವಾನೆ ಆಗುತ್ತಲೇ ಇದೆ.

ಲಕ್ಷದ್ವೀಪದಲ್ಲಿ ನಿರ್ಮಾಣ ಉದ್ಯಮಕ್ಕೆ ಬೇಕಾದ ಕಲ್ಲು, ಜಲ್ಲಿ, ಮರಳು ಹಾಗೂ ಇತರ ಸಲಕರಣೆಗಳು ಮಂಗಳೂರಿನಿಂದಲೇ ಪೂರೈಕೆಯಾಗುತ್ತಿದೆ. ಸರಕು ಸರಬರಾಜಿಗಾಗಿ ನೆರೆಯ ಕೇರಳ ಅಥವಾ ಕರ್ನಾಟಕದ ಕರಾವಳಿ ಭಾಗವನ್ನೇ ಆಶ್ರಯಿಸಲಾಗುತ್ತಿದೆ. ಆದರೆ ಸ್ಥಳೀಯವಾಗಿ ಮರಳು ತೆಗೆಯಲು ಇಲ್ಲಿ ಕಾನೂನಿನ ಸಮಸ್ಯೆ ಇದ್ದರೂ ಅಲ್ಲಿಗೆ ಮಾತ್ರ ನಿರಂತರವಾಗಿ ಸಾಗಾಟವಾಗುತ್ತಿದೆ.

ಇಲ್ಲಿ ಸಾಕಷ್ಟು ಮರಳು ಲಭ್ಯತೆ ಇರುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಲಕ್ಷದ್ವೀಪಕ್ಕೆ ಮರಳು ಸಾಗಾಟ ಮಾಡಲು ಅಧಿಕೃತ ಅನುಮತಿ ನೀಡಿತ್ತು. ಆದರೆ ಇದೀಗ ಇಲ್ಲಿ ಕಳೆದೆರಡು ವರ್ಷಗಳಿಂದ ಮರಳಿನ ಕೊರತೆ ತೀವ್ರವಾಗಿದೆ. ಹೀಗಾಗಿ ಇಲ್ಲಿ ಕೊರತೆ ಇದ್ದರೂ ಅಲ್ಲಿಗೆ ಮಾತ್ರ ಮರಳು ಅವ್ಯಾಹತವಾಗಿ ಸಾಗಾಟವಾಗುತ್ತಿರುವುದು ಅಚ್ಚರಿ ಮೂಡಿಸಿದೆ.

ಮಂಗಳೂರು ಹಳೇ ಬಂದರಿನಿಂದ ಕಳೆದ ಕೆಲವು ವರ್ಷಗಳಿಂದ ಲಕ್ಷದ್ವೀಪಕ್ಕೆ ಸಣ್ಣ ಹಡಗು (ಮಂಜಿ) ಮೂಲಕ ಸಂಚಾರ ವ್ಯವಸ್ಥೆ ಇತ್ತು. ಇದು ಕೇವಲ ಸರಕು ಸಾಗಾಟಕ್ಕೆ ಮಾತ್ರ ಇರುವ ವ್ಯವಸ್ಥೆ. ಆದರೆ ಇದೇ ವ್ಯವಸ್ಥೆಯನ್ನು ಬಳಸಿಕೊಂಡು ಇಲ್ಲಿಂದ ನೂರಾರು ಲೋಡು ಮರಳು, ಜಲ್ಲಿಗಳು ಲಕ್ಷದ್ವೀಪಕ್ಕೆ ಸಾಗುತ್ತಿವೆÉ. ಸಿಮೆಂಟ್ ಚೀಲದಲ್ಲಿ, ಪ್ಯಾಕ್ ಮಾಡಿ ಅದನ್ನು ಕ್ರೇನ್ ಮೂಲಕ ಮಂಜಿಗೆ ಲೋಡ್ ಮಾಡಿ ಸಾಗಾಟ ಮಾಡಲಾಗುತ್ತಿದೆ.

ಕೇರಳದಲ್ಲಿ ಮರಳು ಸಾಗಾಟಕ್ಕೆ ಕಟ್ಟುನಿಟ್ಟಿನ ಕಾನೂನು ಜಾರಿಯಲ್ಲಿರುವ ಕಾರಣ ಅಲ್ಲಿಂದ ಮರಳು ಸಾಗಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಂಗಳೂರಿನಿಂದ ಮರಳು ಗುಪ್ತ ಸಾಗಾಟ ನಡೆದಿದೆ. ಲಕ್ಷದ್ವೀಪದ ಮರಳು ದಲ್ಲಾಳಿಗಳು, ಉದ್ಯಮಿಗಳು ಮಂಗಳೂರಲ್ಲಿ ಗೋಡೌನ್ ಹೊಂದಿದ್ದಾದ್ದಾರೆ.

ಇಲ್ಲಿನ ಹಳೇ ಬಂದರಿನಿಂದ ಲಕ್ಷದ್ವೀಪಕ್ಕೆ 550 ಕಿ ಮೀ ದೂರವಿದ್ದು, ಮಂಜಿಯ ಮೂಲಕ ಸರಕು ಸರಂಜಾಮುಗಳನ್ನು ಸಾಗಾಟ ಮಾಡಲು ಸೂಕ್ತ ವ್ಯವಸ್ಥೆ ಇದೆ. ಈ ಕಾರಣದಿಂದ ಅವರು ಮಂಗಳೂರನ್ನೇ ನೆಚ್ಚಿಕೊಂಡಿದ್ದಾರೆ.

“ಮಂಗಳೂರು ಹಳೇ ಬಂದರು ಮೂಲಕ ಆವೆ ಮಣ್ಣು ಮತ್ತು ಇತರ ಸಾಮಗ್ರಿ ಲಕ್ಷದ್ವೀಪಕ್ಕೆ ಸಾಗಾಟವಾಗುತ್ತಿದೆ. ಆದರೆ ಮರಳು, ಜಲ್ಲಿ ಸಾಗಾಟವಾಗುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ” ಅಂತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಸುಮಿತ್ರಾ. ಈ ಬಗ್ಗೆ ಬಂದರು ಅಧಿಕಾರಿ ಕ್ಯಾಪ್ಟನ್ ಸ್ವಾಮಿ ಅವರನ್ನು ಪ್ರಶ್ನಿಸಿದರೆ ಅವರು ತಮ್ಮಲ್ಲಿ ಈ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ.