ಎಲ್ಕೆಜಿ ಮಗುಗೆ ಶಿಕ್ಷಕಿ ಗಂಭೀರ ಹಲ್ಲೆ

ಮಗುಗೆ ಬಾಸುಂಡೆ ಬಂದಿರುವುದು

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಎಲ್ ಕೆ ಜಿ ಮಕ್ಕಳಿಗೆ ಕಲಿಸುವ ಶಿಕ್ಷಕಿಯೊಬ್ಬರು ಮಗು ತುಂಟಾಟ ಮಾಡಿದೆ ಎಂದು ಮಗುವಿನ ಮೇಲೆ ಗಂಭೀರ ಹಲ್ಲೆ ನಡೆಸಿದ ಘಟನೆ ಪುತ್ತೂರಿನ ಖಾಸಗಿ ಶಾಲೆಯೊಂದರಲ್ಲಿ ಶನಿವಾರ ನಡೆದಿದೆ.

ಇಲ್ಲಿನ ಸೈಂಟ್ ವಿಕ್ಟರ್ ನರ್ಸರಿ ಶಾಲೆಯಲ್ಲಿ ಕಲಿಯುತ್ತಿರುವ ಮಿತ್ತೂರು ಸಮೀಪದ ಬಾಲಕ ಹಲ್ಲೆಗೊಳಗಾದವ. ಬಾಲಕನನ್ನು ಈ ವರ್ಷದಿಂದ ಶಾಲೆಯ ಎಲ್ ಕೆ ಜಿ ತರಗತಿಗೆ ದಾಖಲು ಮಾಡಲಾಗಿತ್ತು. ಬಾಲಕನ ತುಂಟಾಟ ಅಧಿಕವೇ ಇದೆ ಎಂದು ಶಾಲೆಗೆ ಸೇರಿಸುವಾಗಲೇ ಶಿಕ್ಷಕರಿಗೆ ತಿಳಿಸಲಾಗಿತ್ತು. ನಾಲ್ಕು ವರ್ಷ ಪ್ರಾಯದ ಮಕ್ಕಳಿಗೆ ಸಹಜವಾಗಿಯೇ ತುಂಟಾಟ ಇದ್ದು ಏನೂ ಅರಿಯದ ಮುಗ್ದ ಮನಸ್ಸುಗಳಾದ ಕಾರಣ ಶಿಕ್ಷಕರು ಏನು ಮಾಡಿದರೂ ಕೇಳುವುದೇ ಇಲ್ಲ ಎಂಬುದು ಪ್ರತೀ ನರ್ಸರಿ ಶಿಕ್ಷಕಿಗೆ ಗೊತ್ತಿರುವಂತದ್ದೆ. ಆದರೆ ಪುತ್ತೂರಿನ ಸೈಂಟ್ ವಿಕ್ಟರ್ಸ್ ಶಾಲೆಯ ನರ್ಸರಿ ಶಿಕ್ಷಕಿ ಶನಿವಾರದಂದು ಬಾಲಕನ ಚಡ್ಡಿ ಜಾರಿಸಿ ಬೆತ್ತದಿಂದ ಬಾರಿಸಿದ್ದಾರೆ. ಇದರಿಂದ ಬಾಲಕಗೆ ಗಂಭೀರ ಗಾಯಗಳಾಗಿದೆ. ಆದರೂ ವಿಷಯವನ್ನು ಶಿಕ್ಷಕಿ ಯಾರಿಗೂ ಹೇಳದೆ ಮುಚ್ಚಿಟ್ಟಿದ್ದರು.

ಪೋಷಕರು ಬಾಲಕನನ್ನು ಮನೆಗೆ ಕರೆದುಕೊಂಡು ಹೋದ ಬಳಿಕ ನಿಜ ಸಂಗತಿ ಗೊತ್ತಾಗಿದೆ. ಮಗುವನ್ನು ತಕ್ಷಣ ಪುತ್ತೂರಿನ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ, ಬಳಿಕ ಮಗುವನ್ನು ಕರೆತಂದು ಶಾಲೆಯ ಮುಖ್ಯ ಶಿಕ್ಷಕರಲ್ಲಿ ವಿಷಯ ತಿಳಿಸಿದರು. ಮುಖ್ಯ ಶಿಕ್ಷಕಿ ಹಲ್ಲೆ ನಡೆಸಿದ ಶಿಕ್ಷಕಿಯನ್ನು ಕರೆದು ವಿಚಾರಿಸಿ ಪೋಷಕರ ಎದುರೇ ಎಚ್ಚರಿಕೆ ನೀಡಿದರು.

ಸುದ್ದಿ ತಿಳಿಯುತ್ತಿದ್ದಂತೆಯೇ ಬಾಲಕನ ಮನೆಗೆ ಅನೇಕ ಸಂಘ ಸಂಸ್ಥೆಗಳ ಮುಖಂಡರು ಭೇಟಿ ನೀಡಿ, ಅಮಾನುಷವಾಗಿ ಹಲ್ಲೆ ನಡೆಸಿದ ಶಿಕ್ಷಕಿ ವಿರುದ್ಧ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದ್ದಾರೆ. ಆದರೆ ಈ ನಡುವೆ ಹಲ್ಲೆ ನಡೆಸಿದ ಶಿಕ್ಷಕಿ ಬಾಲಕನ ಪೋಷಕರಿಗೆ ಕರೆ ಮಾಡಿ ದಮ್ಮಯ್ಯ ಹಾಕಿದ್ದಾರೆ. “ಹಲ್ಲೆ ನಡೆಸಿದ್ದು ತಪ್ಪಾಯಿತು, ನನ್ನನ್ನು ಕ್ಷಮಿಸಿ, ನಾನು ಇನ್ನು ಕೆಲವೇ ದಿನ ಮಾತ್ರ ಶಿಕ್ಷಕಿಯಾಗಿ ಕೆಲಸ ಮಾಡಲಿದ್ದು, ಬಳಿಕ ನಿವೃತ್ತಿಯಾಗಲಿದ್ದೇನೆ” ಎಂದು ಪೋಷಕರಲ್ಲಿ ತಿಳಿಸಿದ ಕಾರಣ ಪೋಷಕರು ದೂರು ನೀಡದೆ ಸುಮ್ಮನಾಗಿದ್ದಾರೆ.

ತನಿಖೆಗೆ ಆದೇಶ

ಶಿಕ್ಷಕಿ ಹಲ್ಲೆ ನಡೆಸಿದ ಕೃತ್ಯ ಸಾಮಾಜಿಕ ತಾಣಗಳಲ್ಲಿ ಪ್ರಚಾರವಾಗುತ್ತಿದ್ದಂತೆಯೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರು ನಗರ ಠಾಣೆಯ ಇನಸ್ಪೆಕ್ಟರ್ ಮಗುವಿನ ಮೇಲಿನ ಹಲ್ಲೆ ಕೃತ್ಯದ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕರಿ ಶಶಿಧರ್ ಜಿ ಎಸ್ ಅವರಿಗೆ ವಿವರ ಕೇಳಿ ನೊಟೀಸ್ ಜಾರಿ ಮಾಡಿದ್ದಾರೆ. ಹಲ್ಲೆ ದೃಡೀಕರಣವಾದಲ್ಲಿ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ. ಆದರೆ ಮಗುವಿನ ಮೇಲೆ ಹಲ್ಲೆ ನಡೆದರೂ ಜಿಲ್ಲಾ ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿ ತನಗೂ ಘಟನೆಗೂ ಏನೂ ಸಂಬಂಧವಿಲ್ಲದಂತೆ ವರ್ತಿಸಿರುವುದು ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಗಿದೆ. ಘಟನೆಯ ಕುರಿತು ಸಾಮಾಜಿಕ ಸಂಘಟನೆಗಳು ರಾಜ್ಯ ಮಹಿಳಾ ಮತ್ತು ಮಕ್ಕಳ ಆಯೋಗಕ್ಕೆ ಫ್ಯಾಕ್ಸ್ ಮೂಲಕ ದೂರು ರವಾನೆ ಮಾಡಿದ್ದಾರೆ.