ಮದ್ಯದಂಗಡಿ ಸ್ಥಗಿತಕ್ಕೆ ಅಬಕಾರಿ ನ್ಯಾಯಾಲಯ ನಿರ್ದೇಶನ ನೀಡಿದ್ದರೂ ವ್ಯಾಪಾರ ಮುಂದರಿಕೆ !

ಸಾಂದರ್ಭಿಕ ಚಿತ್ರ

ಮತ್ತೆ ಹೋರಾಟದ ಹಾದಿಯಲ್ಲಿ ಕನ್ಯಾನ ಗ್ರಾಮಸ್ಥರು

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಬಾಳೆಕೋಡಿ ಕ್ಷೇತ್ರದ ಪರಿಸರದಲ್ಲಿ ತಲೆಯೆತ್ತಿರುವ ವಿವಾದಿತ ಮದ್ಯದಂಗಡಿಯನ್ನು ಸ್ಥಗಿತಗೊಳಿಸುವಂತೆ ಅಬಕಾರಿ ನ್ಯಾಯಾಲಯ ನಿರ್ದೇಶನ ನೀಡಿದ್ದರೂ ಇನ್ನೂ ವ್ಯಾಪಾರ ಮುಂದುವರಿದಿರುವ ಬಗ್ಗೆ ಕ್ಷೇತ್ರದ ಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಆದೇಶ ಧಿಕ್ಕರಿಸಿದ ಬಾರ್ ಮಾಲಿಕರ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರ ಮತ್ತು ಸ್ವಾಮಿಯ ತೀವ್ರ ಆಕ್ಷೇಪದ ನಡುವೆಯೂ ಕನ್ಯಾನ ಗ್ರಾಮದ ಶಿರಂಕಲ್ಲು ಬಾಳೆಕೋಡಿ ಕ್ಷೇತ್ರದ ಪರಿಸರದಲ್ಲಿ ಮದ್ಯದಂಗಡಿ ತಲೆಯೆತ್ತಿತ್ತು. ಈ ಬಗ್ಗೆ ಕ್ಷೇತ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮಿ, “ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಕಂಟಕವಾಗಿರುವ ಮದ್ಯದಂಗಡಿ ವಿರುದ್ಧ ಸ್ಥಳೀಯರೊಬ್ಬರು ತಾ ಪಂ.ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮದ್ಯದಂಗಡಿಯ ಪರವಾನಿಗೆಯನ್ನು ತಡೆಹಿಡಿಯಲಾಗಿದೆ. ಬಾರ್ ಇರುವ ಕಟ್ಟಡ ಸಂಖ್ಯೆ 4/17 ವಾಸ್ತವ್ಯದ ಮನೆ ಮತ್ತು ಧಾರ್ಮಿಕ ಸ್ಥಳಗಳ 100 ಮೀಟರ್ ಒಳಗಡೆ ಇರುವುದಾಗಿ ವರದಿ ಸಲ್ಲಿಸಲಾಗಿದೆ. ಆದರೆ ಈ ಮದ್ಯದಂಗಡಿಯಿಂದ ಕ್ಷೇತ್ರದ ಕಚೇರಿಗೆ 63 ಮೀಟರ್, ಅಂಬೇಡ್ಕರ್ ಪ್ರತಿಮೆಗೆ 84 ಮೀಟರ್, ಸ್ವಾಮಿ ಆಶ್ರಮ ಹಾಗೂ ಅನ್ನಛತ್ರಕ್ಕೆ 68 ಮೀಟರ್, ದೇವರ ಬನ ಮತ್ತು ಗುಳಿಗ ಸಾನ್ನಿಧ್ಯಗಳಿಗೆ ಕೇವಲ 25 ಮೀಟರ್ ಮತ್ತು ಡೊಂಬಯ್ಯ ನಲಿಕೆಯವರ ವಾಸ್ತವ್ಯದ ಮನೆಗೆ 27 ಮೀಟರ್ ದೂರದಲ್ಲಿದೆ” ಎಂದು ಹೇಳಿದರು.

“ಬೆಂಗಳೂರು ಅಬಕಾರಿ ನ್ಯಾಯಾಲಯದಲ್ಲಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ 2017ರ ಫೆ 2ರವರೆಗೆ ಮದ್ಯದಂಗಡಿಯನ್ನು ಸ್ಥಗಿತಗೊಳಿಸುವಂತೆ ಜಿಲ್ಲಾ ಅಬಕಾರಿ ಇಲಾಖೆಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಆದರೆ ಇದಕ್ಕೆ ಕ್ಯಾರೇ ಮಾಡದ ಮಾಲಿಕರು ಮದ್ಯದಂಗಡಿಯ ವ್ಯಾಪಾರ ಮುಂದುವರಿಸಿದ್ದು, ಇದೀಗ ಮತ್ತೆ ಸಾರ್ವಜನಿಕರು ಹೋರಾಟದ ಹಾದಿ ಹಿಡಿದಿದ್ದಾರೆ” ಎಂದು ತಿಳಿಸಿದರು.