ಸೇನಾ ಕ್ಯಾಂಟೀನಿನಲ್ಲಿ ಸಾರಾಯಿ ಹಗರಣ ಪತ್ತೆ

ಬೆಂಗಳೂರು : ಸೇನಾ ಪಡೆಗಳ ಕ್ಯಾಂಟೀನ್ ಉಗ್ರಾಣ ವಿಭಾಗ ನಿರ್ವಹಿಸುವ ಕ್ಯಾಂಟೀನ್ ಘಟಕಗಳಲ್ಲಿ ಹಗರಣ ಸಂಭವಿಸಿರುವ ಸೂಚನೆ ಲಭ್ಯವಾಗುತ್ತಿದೆ. ವಾರ್ಷಿಕ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಸಿಎಜಿ ಈ ಹಗರಣಗಳನ್ನು ಕಂಡುಹಿಡಿದಿದ್ದು ಶೀಘ್ರದಲ್ಲೇ ವರದಿ ಮಾಡುವ ನಿರೀಕ್ಷೆಯಿದೆ.

2015ರ ಜುಲೈ-ನವಂಬರ್ ಅವಧಿಯ ದಾಖಲೆಗಳನ್ನು ಪರಿಶೀಲಿಸಿರುವ ಸಿಎಜಿ, ವರದಿಯಲ್ಲಿ ಕ್ಯಾಂಟೀನ್ ಘಟಕಗಳು (ಯುಆರ್‍ಸಿ) ಹೆಚ್ಚಿನ ಪ್ರಮಾಣದ ಮದ್ಯವನ್ನು ಖರೀದಿಸಿರುವುದು ಗೋಚರಿಸಿದೆ. ಮಂಜೂರು ಮಾಡಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಮದ್ಯವನ್ನು ಈ ಘಟಕಗಳು ಖರೀದಿಸಿರುವುದರಿಂದ ಹೆಚ್ಚಿನ ಮದ್ಯವನ್ನು ಮಾರುಕಟ್ಟೆಯಲ್ಲಿ ಮುಕ್ತ ಬೆಲೆಗೆ ಮಾರಾಟ ಮಾಡಿರುವ ಸಾಧ್ಯತೆಗಳಿವೆ ಎಂದು ಸಿಎಜಿ ಹೇಳಿದೆ.

ಸೇನಾ ಕ್ಯಾಂಟೀನುಗಳಲ್ಲಿ ಮಾರುಕಟ್ಟೆ ದರಗಳಿಗಿಂತಲೂ ಕಡಿಮೆ ದರದ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ನಿವೃತ್ತ ಮತ್ತು ಹಾಲಿ ಸೇನಾ ಸಿಬ್ಬಂದಿಗೆ ಒದಗಿಸಲಾಗುತ್ತದೆ. ದೇಶದಲ್ಲಿ ಒಟ್ಟು  ನಾಲ್ಕು ಸಾವಿರ ಯುಆರ್‍ಸಿಗಳಿದ್ದು ವರ್ಷಕ್ಕೆ 15 ಸಾವಿರ ಕೋಟಿ ರೂ ವಹಿವಾಟು ನಡೆಸುತ್ತವೆ. ಮೂರು ವರ್ಷಗಳ ಅವಧಿಯಲ್ಲಿ 5,14,369 ಮದ್ಯದ ಶೀಷೆಗಳನ್ನು ಹೆಚ್ಚುವರಿಯಾಗಿ ಪಡೆದಿರುವುದು ಪರಿಶೋಧನೆಯಲ್ಲಿ ತಿಳಿದುಬಂದಿದೆ. ಇದು ಬಾರಿ ಹಗರಣದ ಸೂಚನೆಯಾಗಿದೆ ಎಂದು ಸಿಎಜಿ ವರದಿಮಾಡಿದೆ.