ಮುಲ್ಕಿ ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆ ಅಬಿವೃದ್ದಿಗೆ ಚಾಲನೆ

ಕರಾವಳಿ ಅಲೆ ವರದಿ ಫಲಶೃತಿ

ಮುಲ್ಕಿ : ಮುಲ್ಕಿಯ ಸರ್ವಾಂಗೀಣ ಅಭಿವೃದ್ಧಿಗೆ ಈ ಬಾರಿ ಎಸ್ ಎಫ್ ಸಿ ಯೋಜನೆಯಿಂದ 5 ಕೋಟಿ ರೂಪಾಯಿಗೂ ಅಧಿಕ ಅನುದಾನ ದೊರೆಯಲಿದೆ ಎಂದು ಶಾಸಕ ಕೆ ಅಭಯಚಂದ್ರ ಜೈನ್ ಹೇಳಿದರು. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ  ಮುಲ್ಕಿ ಲಿಂಗಪ್ಪಯ್ಯಕಾಡಿನ ಬಳಿ ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಕೂಡಲೇ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಿದರು. ಲಿಂಗಪ್ಪಯ್ಯಕಾಡು ಸರಕಾರಿ ಶಾಲೆಗೆ ಈ ಬಾರಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರಕಾರದಿಂದ ಸೂಕ್ತ ಅನುದಾನ ನೀಡುವುದಾಗಿ ಅವರು ಹೇಳಿದರು.

ಶಾಸಕರ ನಿಧಿ 10 ಲಕ್ಷ ರೂ  ಮತ್ತು ಟಾಸ್ಕ್ ಪೋರ್ಸ್ ಅನುದಾನ 3 ಲಕ್ಷ ರೂ  ವೆಚ್ಚದಲ್ಲಿ ಲಿಂಗಪ್ಪಯ್ಯಕಾಡುವಿನಿಂದ ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆ ಹಾಗೂ ರಾಜ್ಯ ಹೆದ್ದಾರಿಯ ಕಿಲ್ಪಾಡಿ ವರೆಗಿನ ನೇತಾಜಿ ಸುಭಾಸ್ ಚಂದ್ರ ಬೋಸ್ ರಸ್ತೆಯ ಸುಮಾರು 350 ಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಒಟ್ಟು 13 ಲಕ್ಷ ರೂ ವೆಚ್ಚದಲ್ಲಿ ಈ ರಸ್ತೆಯನ್ನು ಫೇವರ್ ಫಿನಿಶ್ ಹಾಗೂ ಮೋರಿ ನಿರ್ಮಾಣ ಕಾಮಗಾರಿ ನಡೆಸಲಾಗುವುದು ಎಂದವರು ಹೇಳಿದರು.

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ  ಮಟ್ಟು, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾರ್ಡ್, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ, ಕಾಂಗ್ರೆಸ್ ಮುಖಂಡರುಗಳಾದ ಬಿ.ಎಮ್. ಆಸಿಫ್, ಗುತ್ತಿಗೆದಾರ ಸಂತೋಷ್ ಶೆಟ್ಟಿ, ಜಿಪಂ ಇಂಜಿನಿಯರ್ ಪ್ರಶಾಂತ್ ಆಳ್ವ ಮತ್ತಿತರರು ಇದ್ದರು. ಕಳೆದ ಹಲವಾರು ವರ್ಷಗಳಿಂದ ಮುಲ್ಕಿ ರೈಲ್ವೇ ನಿಲ್ದಾಣ ರಸ್ತೆ ಅವ್ಯವಸ್ಥೆ ವಿರುದ್ದ ಕರಾವಳಿ ಅಲೆಯಲ್ಲಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.