`ಎಡಪಂಥೀಯ ಲಿಂಗಾಯತರು ಹಾಗೂ ಬಲಪಂಥೀಯ ವೀರಶೈವರು ಯಾವತ್ತೂ ಒಂದಾಗಲು ಸಾಧ್ಯವಿಲ್ಲ’

`ಹೊಸ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಸಿದ್ದರಾಮಯ್ಯ ಕಾರಣರಲ್ಲ’

ಖ್ಯಾತ ಕನ್ನಡ ಲೇಖಕ ಚಂದ್ರಶೇಖರ್ ಪಾಟೀಲ್ ಅವರು ಚಂಪಾ ಎಂದೇ ಖ್ಯಾತರು. ಬಂಡಾಯ ಸಾಹಿತ್ಯ ಲೋಕದಲ್ಲಿ ಅವರದ್ದು ಪ್ರಮುಖ ಹೆಸರು. ಎಂಬತ್ತರ ದಶಕದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಿದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾದ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಕನ್ನಡ ಆಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು. ತಮ್ಮ ಸ್ನೇಹಿತ ಮತ್ತು ವಿದ್ವಾಂಸ ಎಂ ಎಂ ಕಲಬುರ್ಗಿ ಅವರ ಹತ್ಯೆ 2015ರಲ್ಲಿ ನಡೆದಾಗ ಅದನ್ನು ಖಂಡಿಸಿ ತಮಗೆ ನೀಡಲಾದ ಪಂಪಾ ಪ್ರಶಸ್ತಿಯನ್ನೇ ಸರಕಾರಕ್ಕೆ ಹಿಂದಿರುಗಿಸಿದವರು ಚಂಪಾ. ರಾಜ್ಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರುವ ವೀರಶೈವ-ಲಿಂಗಾಯತ ವಿವಾದದ ಬಗ್ಗೆ ಅವರು ಈ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ತಮ್ಮನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಬೇಕೆಂಬ ಲಿಂಗಾಯತರ ಬೇಡಿಕೆಯನ್ನು ನೀವು ಬೆಂಬಲಿಸುತ್ತೀರಾ ?

ಹೌದು, ಸಂಪೂರ್ಣವಾಗಿ. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಬೇಕೆಂಬ ಚಳುವಳಿಗೆ ನಾನು ಈಗಾಗಲೇ ಸೇರಿದ್ದೇನೆ. ಪ್ರತ್ಯೇಕ ಧರ್ಮದ ಬೇಡಿಕೆಯ ವಿಚಾರದಲ್ಲಿ ಸಹಮತ ಮೂಡಿಸಲು ಮುಂದಿನ ಕೆಲ ತಿಂಗಳುಗಳ ಕಾಲ ಸಂವಾದ ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಚಿಸುತ್ತಿರುವ `ನ್ಯಾಯಕ್ಕಾಗಿ ನಾವು’ ಎಂಬ ಸಮಾನಮನಸ್ಕ ಎಡಪಂಥೀಯ ಸಂಘಟನೆಯನ್ನೂ ನಾನು ಸೇರಿದ್ದೇನೆ.

  • ಭಾರತದಲ್ಲಿ ಜನ್ಮ ತಾಳಿದ ಪ್ರತಿಯೊಂದು ನಂಬಿಕೆ, ಪದ್ಧತಿಯೂ ಹಿಂದುತ್ವದ ಭಾಗವಾಗಿದೆ ಎಂದು ಭಾರತದ ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರೇ ಹೇಳಿದ್ದಾರೆ. ವೀರಶೈವರು ಮತ್ತು ಲಿಂಗಾಯತರು ಬೇರೆ ಬೇರೆ ಎಂದು ನೀವು ಈಗಲೂ ತಿಳಿಯುತ್ತೀರೇನು ?

ವೀರಶೈವರು ಮತ್ತು ಲಿಂಗಾಯತರು ಎರಡು ಧ್ರುವಗಳಿದ್ದಂತೆ. ಸಮಾಜ ಸುಧಾರಕ ಬಸವಣ್ಣ ಅವರು 12ನೇ ಶತಮಾನದಲ್ಲಿ ಹಿಂದೂ ಸಂಪ್ರದಾಯವನ್ನು ವಿರೋಧಿಸಿ ಲಿಂಗಾಯತ ಪಂಥವನ್ನು ಆರಂಭಿಸಿದಂದಿನಿಂದ ಎರಡೂ ಸಮುದಾಯಗಳು ಕಳೆದ ಸುಮಾರು 800 ವರ್ಷಗಳಿಂದ ಮೌನ ಆಂತರಿಕ ಯುದ್ಧದಲ್ಲಿ ತೊಡಗಿವೆ. ಬೇರೆ ಯಾವುದೇ ಹಿಂದೂ ಸಾಮಾಜಿಕ ಸಂಘಟನೆಗಳಂತೆ ವೀರಶೈವರು ಶ್ರೇಣಿ ಆಧರಿತ ಸಮಾಜದ ವರ್ಗೀಕರಣ, ಜಾತಿ ವ್ಯವಸ್ಥೆ, ಪುನರ್ ಜನ್ಮ, ಕರ್ಮ ಇವುಗಳಲ್ಲಿ ನಂಬಿಕೆಯಿರಿಸಿದರೆ, ಲಿಂಗಾಯತರು ಇದನ್ನು ವಿರೋಧಿಸಿ ಸಾಮಾಜಿಕ ಮತ್ತು ಲಿಂಗ ಸಮಾನತೆಗೆ ಒತ್ತು ನೀಡಿದರು. ವೀರಶೈವರು ಸ್ಥಾವರಲಿಂಗ (ಶಿವ)ನ ಮೇಲೆ ನಂಬಿಕೆಯಿರಿಸಿದರೆ, ಲಿಂಗಾಯತರು ಯಾವುದೇ ಮೂರ್ತ ರೂಪವಿಲ್ಲದ ಇಷ್ಟಲಿಂಗ ಅಥವಾ ಆತ್ಮಲಿಂಗದ ಮೇಲೆ ನಂಬಿಕೆಯಿರಿಸಿದವರು.

  • ನಮ್ಮ ಸಂವಿಧಾನದಲ್ಲಿ ಹೊಸ ಧರ್ಮ ಸ್ಥಾಪನೆಗೆ ಅವಕಾಶವಿಲ್ಲ ಎಂದು ಕಾನೂನು ಪಂಡಿತರು ಹೇಳುತ್ತಿದ್ದಾರೆ. ಹೀಗಿರುವಾಗ ಈ ಸಮಾಜ ಸೋಲು ಕಾಣುವ ಯುದ್ಧದಲ್ಲಿ ತೊಡಗಿದೆ ಎಂದು ನಿಮಗನಿಸುವುದಿಲ್ಲವೇ ?

ಈ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಭಾರತದಲ್ಲಿ ಹೊಸ ಧರ್ಮವೊಂದಕ್ಕೆ ಕಾನೂನುಬದ್ಧತೆಯೊದಗಿಸಲು ಕೆಲವು ನ್ಯಾಯಾಲಯಗಳು ನಿರಾಕರಿಸಿದ್ದರೆ ಅದೇ ನ್ಯಾಯಾಲಯಗಳು ಹಿಂದುತ್ವ ಒಂದು ಧರ್ಮವಲ್ಲ ಬದಲಾಗಿ ಜೀವನದ ಮಾರ್ಗವಾಗಿದೆ ಎಂದಿವೆ. ಹೊಸ ಧರ್ಮವೊಂದು ಸಂವಿಧಾನದನ್ವಯ ಕಾನೂನುಬದ್ಧತೆ ಪಡೆಯುವುದೇ ಎಂಬುದು ಈಗಲೂ ಕಾನೂನಾತ್ಮಕವಾಗಿ ಚರ್ಚಾಸ್ಪದ ವಿಚಾರ.

  • ವೀರಶೈವರ ದೌರ್ಜನ್ಯದ ವಿರುದ್ಧ ಬಂಡಾಯ ಸಾರಿರುವ ಲಿಂಗಾಯತರು ಹೊಸ ಧರ್ಮ ಸ್ಥಾಪನೆಗೆ ಬೇಡಿಕೆಯಿಡುತ್ತಿದ್ದಾರೆ ಎಂದು ಕೆಲ ಸಮಾಜವಿಜ್ಞಾನಿಗಳು ಹೇಳುತ್ತಿದ್ದಾರೆ. ನೀವು ಒಪ್ಪುತ್ತೀರಾ ?

ಹೌದು, ಇದು ಭಾಗಃಶ ನಿಜ. ಲಿಂಗಾಯತರನ್ನು ಸಾಂಪ್ರದಾಯಿಕವಾಗಿ ವೀರಶೈವರು ತಾರತಮ್ಯದ ದೃಷ್ಟಿಯಿಂದ ನೋಡುತ್ತಾರೆ. ಅವರು ತಾವು ಹಲವು ವಿಚಾರಗಳಲ್ಲಿ ಉನ್ನತರು ಎಂದು ನಂಬಿದ್ದಾರೆ ಹಾಗೂ ಬಸವಣ್ಣನವರನ್ನು ತಮ್ಮ ಧರ್ಮಗುರುವೆಂದು ಪರಿಗಣಿಸುವುದಿಲ್ಲ. ಈ ದೀರ್ಘಕಾಲದ ಗುದ್ದಾಟ ಈಗ ಬಹಿರಂಗಕ್ಕೆ ಒಳ್ಳೆಯುದಕ್ಕಾಗಿಯೇ ಬಂದಿದೆÉ. ಸೈದ್ಧಾಂತಿಕವಾಗಿ ಲಿಂಗಾಯತರು ಎಡಪಂಥೀಯರು ಹಾಗೂ ವೀರಶೈವರು ಬಲಪಂಥೀಯರು. ಅವರು ಜತೆಯಾಗಲು ಸಾಧ್ಯವಿಲ್ಲ.

  • ವೀರಶೈವರ ಪಂಚಪೀಠಗಳು ದಾವಣಗೆರೆಯಲ್ಲಿ ಸಮ್ಮೇಳನವೊಂದನ್ನು ನಡೆಸಿ ವೀರಶೈವರು ಮತ್ತು ಲಿಂಗಾಯತರನ್ನು ಒಂದಾಗಿಸಲು ನಿರ್ಧರಿಸಿದ್ದಾರೆ. ಇದು ಫಲಕಾರಿಯಾಗುವುದೇ ?

ಅವರು ತಾವು ಹಿಂದೂ ಧರ್ಮದ ಭಾಗವಲ್ಲ ಎಂದು ಘೋಷಿಸಿ ಲಿಂಗಾಯತರೊಡನೆ ಸೇರಿ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕೆ ಬೇಡಿಕೆ ಸಲ್ಲಿಸಿದರೆ ಮಾತ್ರ ಇದು ಫಲಕಾರಿಯಾಗಬಹುದು.

  • 2018ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಲಿಂಗಾಯತರನ್ನು ವಿಭಜಿಸಲು ಯತ್ನಿಸುತ್ತಿರುವ ಸಿದ್ದರಾಮಯ್ಯನವರ ಕೈಗೊಂಬೆಯಂತೆ ಲಿಂಗಾಯತರು  ವರ್ತಿಸುತ್ತಿದ್ದಾರೆಯೇ ?

ಯಾವುದೇ ವಿಚಾರಕ್ಕೂ ರಾಜಕೀಯ ಆಯಾಮವಿರುತ್ತದೆ. ಹೊಸ ಧರ್ಮಕ್ಕಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಸಿದ್ದರಾಮಯ್ಯನವರನ್ನು ದೂಷಿಸಲು ಸಾಧ್ಯವಿಲ್ಲ. ಈಗಿನ ಸಮಸ್ಯೆಗೆ ಅವರು ಕಾರಣರಲ್ಲ. ಒಬ್ಬ ರಾಜಕಾರಣಿ ಮಾಡುವಂತಹುದ್ದನ್ನೇ ಅವರೂ ಮಾಡಿದ್ದಾರೆ. ಅಷ್ಟಕ್ಕೂ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಅವರಿಗೆ ಯಾವ ಅಧಿಕಾರವೂ ಇಲ್ಲ. ಅವರು ಕೇವಲ ಸಮುದಾಯದ ಬೇಡಿಕೆಯ ಬಗ್ಗೆ ಆಶ್ವಾಸನೆ ನೀಡಿದ್ದಾರೆ. ಇದು ಆಶಾಭಾವನೆಯನ್ನು ಮೂಡಿಸಿದೆ.