ಸಮಾನತೆ, ಮಾನವೀಯ ಮೌಲ್ಯದ ಸಾಹಿತ್ಯ ರಚನೆಗೆ ಲಿಂಬಾಳೆ ಆಗ್ರಹ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಇಂದು ಸಾಹಿತ್ಯ ಕ್ಷೇತ್ರದಲ್ಲಿ ಸಾಮಾಜಿಕ, ಮಾನವೀಯ ಮೌಲ್ಯಗಳಿಗೆ ಬೆಲೆ ನೀಡದೇ ಕೇವಲ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಕೃತಿಗಳೇ ವಿಜೃಂಭಿಸುತ್ತಿವೆ. ಮಾನವೀಯತೆಗೆ ಆದ್ಯತೆ ನೀಡುವಂತಹ ಸಾಹಿತ್ಯವು ದಲಿತ, ಆದಿವಾಸಿ, ಕ್ರಿಶ್ಚಿಯನ್, ಮುಸ್ಲಿಂ, ಹಿಂದುಳಿದ ವರ್ಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೂಡಿ ಬರಬೇಕಾಗಿದೆ” ಎಂದು ಮರಾಠಿ ಸಾಹಿತಿ ಶರಣಕುಮಾರ ಲಿಂಬಾಳೆ ಹೇಳಿದ್ದಾರೆ.

`ಸಮತೆ ಎಂಬುದು ಅರಿವು’ ಎನ್ನುವ ಘೋಷಣೆಯಡಿ ಅಭಿಮತ ಮಂಗಳೂರು ಇದರ ವತಿಯಿಂದ ಬಜ್ಜೋಡಿಯ ಶಾಂತಿ ಕಿರಣದಲ್ಲಿ ನಡೆದ ಜನನುಡಿ 2016ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಮಾಯಣದಲ್ಲಿನ ಉದಾಹರಣೆಯನ್ನು ನೀಡಿದ ಲಿಂಬಾಳೆ, “ರಾಮಾಯಣದಲ್ಲಿ ಬೇಡರ ಜನಾಂಗದ ಶಂಭೂಕನನ್ನು ಕೊಲ್ಲುವ ಸನ್ನಿವೇಶವಿದೆ. ಭಗವದ್ಗೀತೆಯು ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರು ಶ್ರೇಷ್ಠ ಎನ್ನುವುದನ್ನು ಪ್ರತಿಪಾದಿಸುತ್ತದೆ. ಇಂತಹ ಸಾಹಿತ್ಯ ಕೃತಿಗಳನ್ನು ನಮಗೆ ಆದರ್ಶವೆನ್ನಲು ಖಂಡಿತಾ ಸಾಧ್ಯವಿಲ್ಲ. ಸಮಾನತೆ, ಮಾನವೀಯತೆ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೃತಿಗಳಿಗೆ ಆದ್ಯತೆ ನೀಡೋಣ” ಎಂದವರು ಹೇಳಿದರು.

“ನಮಗೆ ಇಂದು ರಾಜಕೀಯ ಸ್ವಾತಂತ್ರ್ಯ ಸಿಗಲು ಅಂಬೇಡ್ಕರ್ ಹೋರಾಟ ಕಾರಣವಾಗಿದೆ. ಆದರೆ ನಮ್ಮ ದೇಶದಲ್ಲಿ ಇನ್ನೂ ಕೂಡಾ ಬಹುಸಂಖ್ಯಾತ ಜನರಿಗೆ ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಹೀಗಾಗಿ ಅಂಬೇಡ್ಕರ್ ಮಾಡಿದ ಹೋರಾಟವನ್ನು ಮುಂದುವರಿಸಬೇಕಾಗಿದೆ” ಎಂದರು.

ಈ ಸಂದರ್ಭ ಮಾತನಾಡಿದ ಚಿತ್ರ ನಟ ಚೇತನ್, “ಅರಣ್ಯ ಪ್ರದೇಶದಲ್ಲಿ ವಾಸಿಸುವ ಆದಿವಾಸಿಗಳಿಂದ ಅರಣ್ಯ ಪ್ರದೇಶ ನಾಶವಾಗುತ್ತಿಲ್ಲ. ಅಲ್ಲಿನ ಮಂದಿ ಪರಿಸರದ ಜೊತೆ ಬೆಳೆಯುತ್ತಾರೆ. ಅವರು ಯಾವುದೇ ಕಾರಣಕ್ಕೂ ಅರಣ್ಯ ಪ್ರದೇಶವನ್ನು ನಾಶಪಡಿಸಲಾರರು. ಸರಕಾರ ಆದಿವಾಸಿಗಳ ಮೇಲೆ ಮಾತ್ರ ದೌರ್ಜನ್ಯವನ್ನು ನಡೆಸಿದೆÉ. ಬಡವರ ಮೇಲೆ ದೌರ್ಜನ್ಯ ಮಾಡುವ ಸರಕಾರ ಶ್ರೀಮಂತ ವರ್ಗದವರು ಮಾಡುವ ತಪ್ಪಿಗೆ ಶಿಕ್ಷಿಸಲು ಹಿಂದೇಟು ಹಾಕುತ್ತಿರುವುದು ದುರಂತ” ಎಂದರು.

ವಿಜಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಿಕ್ಷಣ ಸಚಿವ ಬಿ ಎ ಮೊಯ್ದೀನ್, ಡಾ ನಾಗಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.