ಸಿಡಿಲಿಗೆ ಮಗು, ಇಬ್ಬರು ಮಹಿಳೆಯರ ಸಾವು

ನದಿಯಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಘಟನೆ, ಇನ್ನೊಂದು ಮಗು ಗಂಭೀರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಹಠಾತ್ ಬಂದೆರಗಿದ ಸಿಡಿಲಿನ ಆಘಾತಕ್ಕೆ ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ದಾರುಣವಾಗಿ ಮೃತಪಟ್ಟು ಇನ್ನೊಂದು ಮಗು ಗಂಭೀರ ಗಾಯಗೊಂಡ ಘಟನೆ ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತರನ್ನು ತುಮಕೂರು ಜಿಲ್ಲೆಯ, ಶಿರಾ ತಾಲೂಕಿನ ಡ್ಯಾಗೇರಹಳ್ಳಿ ನಿವಾಸಿಗಳಾದ ಜಯಣ್ಣ ಎಂಬವರ ಪತ್ನಿ ಜಯಮ್ಮ (28), ತಿಮ್ಮಯ್ಯ ಎಂಬವರ ಪತ್ನಿ ಕಣಕಮ್ಮ (29) ಹಾಗೂ ಈರಣ್ಣ ಎಂಬವರ ಪುತ್ರಿ ಶಶಿಕಲಾ (7 ವರ್ಷ) ಎಂದು ಹೆಸರಿಸಲಾಗಿದ್ದು, 2 ವರ್ಷ ಪ್ರಾಯದ ಮಗು ಲಿಖಿತ್ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರ್ಮಿಕರಾಗಿ ದುಡಿಯುತ್ತಿರುವ ಮಹಿಳೆಯರು ನೇತ್ರಾವತಿ ನದಿಗೆ ಬಟ್ಟೆ ಒಗೆಯಲು ಇಳಿದಿದ್ದರು ಎನ್ನಲಾಗಿದೆ. ಗಾಳಿ-ಮಳೆ ಇಲ್ಲದೆ ಇದ್ದರೂ ಸಣ್ಣ ಪ್ರಮಾಣದ ಸಿಡಿಲೊಂದು ನೇರವಾಗಿ ನದಿಯಲ್ಲಿದ್ದ ಕಾರ್ಮಿಕ ಕುಟುಂಬದ ಮೇಲೆರಗಿದೆ. ಜಯಮ್ಮ ಹಾಗೂ ಕಣಕಮ್ಮ ಸ್ಥಳದಲ್ಲೇ ಮೃತಪಟ್ಟರೆ, ಮಗು ಶಶಿಕಲಾ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದು, ಇನ್ನೊಂದು ಮಗು ಲಿಖಿತ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.