ದಲಿತ ಚಿಂತಕ ಕಾಂಚಾ ಇಳಯ್ಯಗೆ ಜೀವ ಬೆದರಿಕೆ

ಇಳಯ್ಯ ಬರೆದ `ಸಾಮಾಜಿಕ ಸ್ಮಗ್ಲರುಲು ಕೋಮಾತೊಲು (ವೈಶ್ಯರು ಸಾಮಾಜಿಕ ಕಳ್ಳಸಾಗಣಿಕೆ ಗಾರರು)’  ಎನ್ನುವ ಪುಸ್ತಕದಿಂದಾಗಿ ವೈಶ್ಯ ಸಂಘಟನೆಗಳು ಬಹಳ ಆಕ್ರೋಶಗೊಂಡಿವೆ.

ಹೈದರಾಬಾದ್ : ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬಂದ ಮೇಲೆ ಲೇಖಕ ಮತ್ತು ಪ್ರಗತಿಪರ ಚಿಂತಕ ಕಾಂಚ ಇಳಯ್ಯ ಹೈದರಾಬಾದಿನ ಒಸ್ಮಾನಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಭಾನುವಾರ ಮಧ್ಯಾಹ್ನದಿಂದಲೇ ತಮಗೆ `ನಾಲಗೆ ಕತ್ತರಿಸುತ್ತೇವೆÉ’ ಎನ್ನುವ ಅಪರಿಚಿತ ಕರೆಗಳು ಬರುತ್ತಿವೆ ಎಂದು ದೂರಿನಲ್ಲಿ ಅವರು ಹೇಳಿದ್ದಾರೆ. ತನಗೇನಾದರೂ ತೊಂದರೆಯಾದಲ್ಲಿ ಆರ್ಯ-ವೈಶ್ಯ ಸಂಘವನ್ನೇ ಜವಾಬ್ದಾರರನ್ನಾಗಿ ಮಾಡಬೇಕು ಎಂದೂ ಅವರು ದೂರಿನಲ್ಲಿ ಹೇಳಿದ್ದಾರೆ.

`ನಿನ್ನೆಯಿಂದಲೇ ಹಲವು ಅಪರಿಚಿತ ಫೋನ್ ಕರೆಗಳು ಬರುತ್ತಲೇ ಇವೆ ಮತ್ತು ನಾನು ಉತ್ತರಿಸಿದಾಗ ನನಗೆ ಬೈಗುಳ ನೀಡಿದ್ದಾರೆ. ಕೆ ರಾಮಕೃಷ್ಣ ನೇತೃತ್ವದ ಅಂತರರಾಷ್ಟ್ರೀಯ ಆರ್ಯ-ವೈಶ್ಯ ಸಂಘಂ ನನ್ನ ಬರಹಗಳನ್ನು ಟೀವಿ ವಾಹಿನಿಯಲ್ಲಿ ಟೀಕಿಸಿದೆ. ಕೆಲವರು ನನ್ನ ನಾಲಗೆ ಕತ್ತರಿಸುವುದಾಗಿ ಹೇಳಿದ್ದಾರೆ. ನನ್ನ ಪ್ರತಿಕೃತಿಯನ್ನು ದಹನ ಮಾಡಿದ್ದಾರೆ. ಅವರ ಬೈಗುಳ, ಫೋನ್ ಕರೆಗಳು ಮತ್ತು ಸಂದೇಶಗಳಿಂದ ನನಗೆ ಬಹಳ ಭಯವಾಗಿದೆ. ನನಗೇನಾದರೂ ಆದಲ್ಲಿ ಅವರೇ ಜವಾಬ್ದಾರರು’ ಎಂದು ಕಾಂಚ ದೂರಿನಲ್ಲಿ ಹೇಳಿದ್ದಾರೆ. ಇಳಯ್ಯ ಬರೆದ `ಸಾಮಾಜಿಕ ಸ್ಮಗ್ಲರುಲು ಕೋಮಾತೊಲು (ವೈಶ್ಯರು ಸಾಮಾಜಿಕ ಕಳ್ಳಸಾಗಣಿಕೆಗಾರರು)’ ಎನ್ನುವ ಪುಸ್ತಕದಿಂದಾಗಿ ವೈಶ್ಯ ಸಂಘಟನೆಗಳು ಬಹಳ ಆಕ್ರೋಶಗೊಂಡಿವೆ. ಪುಸ್ತಕದ ತಲೆಬರಹ ಮತ್ತು ಒಳಗಿರುವ ಕೆಲ ಮಾಹಿತಿಗಳು ತಮ್ಮ ಸಮುದಾಯಕ್ಕೆ ಅವಹೇಳನಕಾರಿ ಎಂದು ವೈಶ್ಯ ಸಮುದಾಯ ಹೇಳಿದೆ. ಪುಸ್ತಕವನ್ನು ನಿಷೇಧಿಸುವಂತೆಯೂ ಒತ್ತಾಯಿಸಿದ್ದಾರೆ. ಆಂಧ್ರಪ್ರದೇಶ ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷ ಜೆ ವೆಂಕಟೇಶ್ವರ ಅವರು ಅಧಿಕೃತವಾಗಿ ಇಳಯ್ಯ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಘೋಷಿಸಿದ್ದಾರೆ.

ಇಳಯ್ಯ ಭಾರತೀಯ ರಾಜಕೀಯ ವಿಜ್ಞಾನಿ ಮತ್ತು ಲೇಖಕರು. ಅವರು ಇಂಗ್ಲಿಷ್ ಮತ್ತು ತೆಲುಗು ಎರಡರಲ್ಲೂ ನಿಷ್ಣಾತರು. ಅವರು ದಲಿತ ಹಕ್ಕುಗಳ ಹೋರಾಟರೂ ಹೌದು.