ಜೀವನವೇ ಬೇಸರವಾಗಿ ಬಿಟ್ಟಿದೆ

ಪ್ರ : ನನಗೀಗ 43 ವರ್ಷ. ಇಬ್ಬರು ಬೆಳೆದ ಗಂಡುಮಕ್ಕಳಿದ್ದಾರೆ. ನನ್ನ 20ನೇ ವಯಸ್ಸಿಗೇ ಮದುವೆಯಾಯಿತು. ಮದುವೆಯಾದ ಹೊಸದರಲ್ಲಿ ಗಂಡನಿಗೆ, ಗಂಡನ ಮನೆಯವರಿಗೆ ಹೊಂದಿಕೊಳ್ಳುವುದು ಬಹಳ ಕಷ್ಟವಾಯಿತು. ತುಂಬಿದ ಕುಟುಂಬದಿಂದ ಬಂದ ನನ್ನ ಬಗ್ಗೆ ಗಮನಕೊಡಲೂ ನನ್ನ ಹೆತ್ತವರಿಗೆ ಆಗಿರಲಿಲ್ಲ. ನಾನು ಮತ್ತು ನನ್ನ ಗಂಡ ಬೆಳೆದ ವಾತಾವರಣದಲ್ಲಿ ತುಂಬಾ ವ್ಯತ್ಯಾಸವಿದ್ದ ಕಾರಣ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲೇ ಕೆಲವು ವರ್ಷ ಬೇಕಾಯಿತು. ಗಂಡನ ಸಂಪಾದನೆಯೂ ಹೇಳುವಷ್ಟು ಇಲ್ಲದ ಕಾರಣ ನಾನೂ ನೌಕರಿ ಮಾಡುವುದು ಅನಿವಾರ್ಯವಾಯಿತು. ನನ್ನ ಯೌವನ ಮನೆ, ಮಕ್ಕಳು, ಆಫೀಸು ಸಂಭಾಳಿಸುವುದರಲ್ಲೇ ಕಳೆಯಿತು. ಆದರೆ ನನ್ನ ಗಂಡ ಮಾತ್ರ ತನಗೆ ಯಾವುದಕ್ಕೂ ಕಡಿಮೆ ಮಾಡಿಕೊಳ್ಳಲಿಲ್ಲ. ಅವರೊಬ್ಬರೇ ಸ್ನೇಹಿತರ ಜೊತೆ ಗಮ್ಮತ್ತು ಮಾಡುತ್ತಿದ್ದರು. ಗೆಳೆಯರ ಗುಂಪು ಕಟ್ಟಿಕೊಂಡು ಆಗಾಗ ನನ್ನನ್ನು ಬಿಟ್ಟು ಒಬ್ಬರೇ ಪಿಕ್ನಿಕ್ ಹೋಗುತ್ತಿದ್ದರು. ಮನೆಯಲ್ಲಿ ಜಾಸ್ತಿ ಹೊತ್ತು ಕಳೆಯುವುದು ಅವರಿಗಾಗದ ವಿಷಯ. ಮಕ್ಕಳು ಸ್ವಲ್ಪ ಕಿರಿಕಿರಿ ಮಾಡಿದರೂ ಅವರಿಗಾಗುತ್ತಿರಲಿಲ್ಲ. ಅದಕ್ಕಾಗಿ ಮಕ್ಕಳೂ ಅವರ ಜೊತೆ ಸಲಿಗೆಯಿಂದಿಲ್ಲ. ಈಗ ಅವರು ದೊಡ್ಡವರಾಗಿದ್ದಾರೆ. ತಂದೆಯ ಮೋಜುಮಸ್ತಿಯ ಗುಣವೇ ಅವರಿಗೆ ಬಂದಿದೆ. ನನ್ನನ್ನು ಪೀಡಿಸಿ ಹಣ ಪಡೆದು ಸಿನಿಮಾ, ಹೊಟೇಲು ಅಂತ ಹೋಗುತ್ತಿರುತ್ತಾರೆ. ಹೇಳಿದರೆ ಕೇಳುವ ಸ್ಥಿತಿಯಲ್ಲೂ ಮಕ್ಕಳಿಲ್ಲ. ತಂದೆಯ ಪ್ರೀತಿ, ಅವರ ಹಿಡಿತ ಮಕ್ಕಳ ಮೇಲಿಲ್ಲ. ಮಕ್ಕಳ ಬಗ್ಗೆ ಏನಾದರೂ ದೂರು ಹೇಳಿದರೆ ಅವರಿಗೆ ಬುದ್ಧಿ ಹೇಳುವುದು ಬಿಟ್ಟು ಬೆಳೆದವರು ಅಂತ ಸಹ ನೋಡದೇ ಹೊಡೆದುಬಿಡುತ್ತಾರೆ. ಅದಕ್ಕಾಗಿ ಮಕ್ಕಳ ಬಗ್ಗೆ ಅವರಲ್ಲಿ ಮಾತಾಡಲೇ ಭಯವಾಗುತ್ತದೆ. ಕೆಲವು ವರ್ಷಗಳ ಹಿಂದೆ ಸಾಲ ಮಾಡಿ ಚಿಕ್ಕ ಮನೆ ತೆಗೆದುಕೊಂಡಿದ್ದೆವು.. ಅದರ ಕಂತೂ ಸಹ ನನ್ನ ಸಂಬಳದಲ್ಲೇ ಕಟ್ ಆಗುತ್ತಿದೆ. ಈಗ ನನಗೆ ಮುಟ್ಟಿನ ಸಮಸ್ಯೆ ಬೇರೆ ಎದುರಾಗಿದೆ. ದೇಹದಲ್ಲಿ ವಿಪರೀತ ಸುಸ್ತು ಕಾಡುತ್ತಿದೆ. ಆಫೀಸಿಗೆ ಹೋಗಲು ತ್ರಾಸಾಗುತ್ತಿದೆ. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಹೋಗದಿದ್ದರೆ ವಿಧಿಯಿಲ್ಲ. ಜೀವನವೇ ಸಾಕಾಗಿ ಹೋಗಿದೆ. ನನಗೆ ಮುಕ್ತಿ ಎಂದು?

ಉ : ನಮ್ಮ ಭಾರತೀಯ ಮಹಿಳೆಯರ ಸಮಸ್ಯೆಯೇ ಇದು. ಅವರು ಗುತ್ತಿಗೆ ತೆಗೆದುಕೊಂಡ ಹಾಗೆ ಎಲ್ಲ ಜವಾಬ್ದಾರಿಯನ್ನೂ ತಾವೇ ಹೊರುತ್ತಾರೆ. ಗಂಡ, ಮಕ್ಕಳು, ಸಂಸಾರ ಅಂದರೆ ಅತೀ ಮಮತೆ. ಕುಟುಂಬದ ಸದಸ್ಯರೆಲ್ಲರ ಒಳಿತಿಗಾಗಿ ದುಡಿಯುವುದರಲ್ಲಿ ತನ್ನ ಹಿತವನ್ನೇ ಮರೆಯುತ್ತಾಳೆ. ಬಗ್ಗಿದವರಿಗೆ ಒಂದು ಗುದ್ದು ಜಾಸ್ತಿ ಅನ್ನುವಂತೆ ದುಡಿಯುವ ಹೆಂಡತಿ ಇರುವುದರಿಂದ ತಾನು ಕರ್ತವ್ಯ ಮರೆತು ನಿಮ್ಮ ಗಂಡ ಮತ್ತಿಷ್ಟು ಜವಾಬ್ದಾರಿಯನ್ನು ನಿಮ್ಮ ಮೇಲೇ ಹಾಕಿದ್ದಾನೆ. ನೀವು ಮೊದಲು ಅದನ್ನು ಹೆಂಡತಿಯ ಪರಮಧರ್ಮ ಅಂತ ಸಹಿಸಿಕೊಂಡಿರಿ. ಆಗಲೇ ಗಂಡನಿಗೆ ಕೆಲವು ಜವಾಬ್ದಾರಿಯನ್ನು ಅವರು ನಿರ್ವಹಿಸಲೇಬೇಕೆಂದು ತಾಕೀತು ಮಾಡಿದ್ದರೆ ನಿಮ್ಮ ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತಿರಲಿಲ್ಲ. ಮಕ್ಕಳೂ ಅಷ್ಟೇ, ತಾಯಿಯನ್ನು ಪೀಡಿಸಿ ಸವಲತ್ತು ಪಡೆಯುವುದು ಅವರಿಗೆ ಸುಲಭ. ಅವರ ಮೇಲೆ ಸ್ವಲ್ಪವಾದರೂ ಹಿಡಿತ ಇರುವುದು ಒಳ್ಳೆಯದು. ಪಾಕೆಟ್ ಮನಿ ಕೊಡುವಾಗಲೂ ಒಂದು ಲಿಮಿಟ್ ಇರಲಿ. ಅದಕ್ಕಿಂತ ಹೆಚ್ಚು ಕೊಡಲು ನಿಮ್ಮಿಂದ ಸಾಧ್ಯವೇ ಇಲ್ಲ ಅನ್ನಿ. ಬೇಕಿದ್ದರೆ ಪಾರ್ಟ್‍ಟೈಮ್ ಕೆಲಸ ಮಾಡಲಿ. ಎಲ್ಲಕ್ಕಿಂತ ಮುಖ್ಯವಾಗಿ ಇನ್ನಾದರೂ ನೀವು ನಿಮ್ಮ ಗಂಡ ಮತ್ತು ಮಕ್ಕಳನ್ನು ಕೂರಿಸಿಕೊಂಡು ವಾಸ್ತವ ವಿಷಯವನ್ನು ವಿವರವಾಗಿ ತಿಳಿಸಿ. ನಿಮ್ಮ ಹತಾಶೆ, ನಿಮ್ಮ ಅನಾರೋಗ್ಯ ಎಲ್ಲವನ್ನೂ ಅವರ ಮುಂದೆ ತೆರೆದಿಡಿ. ಎಷ್ಟೆಂದರೂ ಅವರು ನಿಮ್ಮವರು. ನೀವು ಕಷ್ಟದಲ್ಲಿ ಇರುವುದು ಅವರಿಗೆ ಗೊತ್ತಾಗಲೇ ಬೇಕು. ಕುಟುಂಬ ಬೇಕಿರುವುದು ನಿಮಗೊಬ್ಬರಿಗೇ ಅಲ್ಲವಲ್ಲ. ನಿಮ್ಮ ಗಂಡನಿಗೂ ಈಗ ಮಧ್ಯೆ ವಯಸ್ಸಾಗಿರುವುದರಿಂದ ಮತ್ತು ಮಕ್ಕಳೂ ದೊಡ್ಡವರಾಗಿರುವುದರಿಂದ ನೀವು ಸರಿಯಾಗಿ ತಿಳಿಸಿದರೆ ಅವರಿಗೆ ನಿಮ್ಮ ಸಮಸ್ಯೆ ಅರ್ಥವಾಗದೇ ಇರದು. ಮನಸ್ಸಿನಲ್ಲೇ ಮಂಡಿಗೆ ತಿನ್ನದೇ ಎಲ್ಲರೊಂದಿಗೆ ನಿಮ್ಮ ಭಾವನೆ ಹಂಚಿಕೊಂಡು ಎಲ್ಲರೂ ಸುಖ, ದುಃಖದಲ್ಲಿ ಭಾಗಿಗಳಾಗುವಂತೆ ಮಾಡುವುದರಲ್ಲೇ ನಿಮ್ಮ ಜಾಣತನ ಅಡಗಿದೆ.