ಕಟೀಲು ಯಕ್ಷ ಕಲಾವಿದರ ಬಗ್ಗೆ ಮಾತನಾಡುವ ಬದಲು ಕಲೆ ಉಳಿಸುವ ಬಗ್ಗೆ ಆಲೋಚಿಸೋಣ

ಕಟೀಲು ಮೇಳದ ಕಲಾವಿದರ ವರ್ಗಾವಣೆ ಬಳಿಕ ಹುಟ್ಟಿಕೊಂಡ ಅನೇಕ ಅಭಿಪ್ರಾಯಗಳು ಮತ್ತು ಸ್ಪಷ್ಟನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಬರುವುದನ್ನು ನೋಡಿದಾಗ ಇದರ ಹಿಂದೆ ಅನೇಕ ನಿಗೂಢ ನಡೆಗಳು ಇರುವಂತೆ ಭಾಸವಾಗುತ್ತದೆ. ಹೊರಗೆ ನಾವೆಲ್ಲ ಒಂದೇ ಕಡೆಯಲ್ಲಿ ಇರುವವರಂತೆ ತೋರಿಸಿಕೊಳ್ಳುತ್ತಾರಾದರೂ ಹೇಳಿಕೆಗಳನ್ನು ನೋಡುವಾಗ ಇದರ ಹಿಂದೆ ಜಾತೀಯ ಪ್ರತಿಷ್ಠೆ ಹಿರಿಮೆಗಳು ಇವೆಯೋ ಎಂದು ಅನುಮಾನ ಬರುತ್ತದೆ ಯಕ್ಷಗಾನವೆಂಬ ಕಲೆ ಜನಪ್ರಿಯಗೊಂಡಾಗ ಅದರಲ್ಲಿ ತೊಡಗಿರುವ ಕಲಾವಿದರಿಗೆ ಸಹಜವಾಗಿ ಪ್ರಸಿದ್ಧಿ ಬಂದು ಬಿಡುತ್ತದೆ. ಅಂತಹ ಕಲಾವಿದರನ್ನು ಆರಾಧಿಸುವ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ ಅಭಿಮಾನಿಗಳ ಮಾತುಗಳನ್ನೇ ಕೇಳುತ್ತಾ ಹೋದರೆ ಆ ಕಲಾವಿದ ವಾಸ್ತವ ಪ್ರಪಂಚವನ್ನು ಮರೆತು ಬಿಡುತ್ತಾನೆ ಅಥವಾ ಕಡೆಗಣಿಸುತ್ತಾನೆ. ಒಬ್ಬ ನಿಜ ಕಲಾವಿದ ತನ್ನನ್ನು ಹೊಗಳುವವರ ಮಾತನ್ನು ಮಾತ್ರ ಕೇಳುವುದಲ್ಲ ತೆಗಳುವವನ ಟೀಕಿಸುವವರ ಅಭಿಪ್ರಾಯಗಳನ್ನು ಆಲಿಸುತ್ತಾನೆ
ಅತಿ ಹೆಗ್ಗಳಿಕೆಯನ್ನು ಕೇಳಿಸಿಕೊಂಡು ಬೀಗುವ ಕಲಾವಿದ ಈ ಕಲೆಗೆ ತಾನು ತುಂಬಾ ಕೊಡುತ್ತಿದ್ದೇನೆಂದು ಭಾವಿಸತೊಡಗುತ್ತಾನೆ ಈ ಕಲೆ ಈಗ ತನ್ನಿಂದಾಗಿಯೇ ಪ್ರಸಿದ್ಧವಾಗ ತೊಡಗಿದೆ ಎಂದು ಭಾವಿಸುತ್ತಾನೆ ಅಂತಹ ಕಲಾವಿದರನ್ನು ನಿಯಂತ್ರಣದಲ್ಲಿಡುವುದು ಕಷ್ಟ
ರಂಗದ ಮೇಲಿನ ಚುಂಬನ ಪ್ರಕರಣ ಅದಕ್ಕೊಂದು ಉದಾಹರಣೆ ನಾವು ಮಾಡಿದ್ದೆಲ್ಲವೂ ಸರಿ ಇರುತ್ತದೆ ಜನ ಅದನ್ನು ಮೆಚ್ಚುತ್ತಾರೆ ಎಂಬ ಈ ಕಲಾವಿದರ ಭಾವನೆಯೇ ಅವರಿಂದ ಅಂತಹದ್ದೆನ್ನೆಲ್ಲ ಮಾಡಿಸುತ್ತದೆ ಚುಂಬನ ಪ್ರಕರಣ ನಡೆಯಿತು ಅದರ ಬೆನ್ನಿಗೆ ಬಂಡಾಯ ಪ್ರಕರಣ ನಡೆದಿದೆ. ಇವುಗಳನ್ನು ಸಮರ್ಥಿಸಿಕೊಳ್ಳಲು ಪತ್ರಿಕಾ ಹೇಳಿಕೆಗಳು ಗೋಷ್ಠಿಗಳು ಅಭಿಮಾನಿಗಳ ಸಭೆಗಳು ಎಲ್ಲಾ ನಡೆದು ಕೊನೆಗೆ ಹೇಗೋ ಮುಕ್ತಾಯಗೊಳ್ಳುತ್ತವೆ ಕೀರ್ತಿ ಪ್ರತಿಷ್ಠೆ ಸಂಪಾದನೆಗಳ ಹಿಂದೆ ಹೋಗುವವರಿಂದ ಕಲೆ ಉದ್ಧಾರವಾಗುವುದಿಲ್ಲ ಕಲಾವಿದರ ಬಗ್ಗೆ ಮಾತನಾಡುವ ಬದಲು ನಾವೀಗ ಕಲೆಯ ಬಗ್ಗೆ ಮಾತನಾಡಬೇಕಿದೆ ಇಲ್ಲವಾದರೆ ಒಟ್ಟು ಪ್ರಚಾರ ವೈಭವಗಳ ಭರಾಟೆಯಲ್ಲಿ ಕಲೆಯ ಸ್ಥಿತಿ ಕಳವಳಕಾರಿಯಾಗುವುದರಲ್ಲಿ ಸಂಶಯವಿಲ್ಲ

  • ಮುಕೇಶ್ ಎಂ  ಮಂಗಳೂರು