ಕೇರಳ ಮಾದರಿಯಲ್ಲಿ ಟೋಲ್ ಸಂಗ್ರಹಿಸಲಿ, ಅದಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಲಿ’

ಸುದ್ದಿಗಾರರಲ್ಲಿ ಮಾತಾಡಿದ ಮುಖಂಡರು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : “ವಾಹನಗಳಿಂದ ನೂರಾರು ರೂಪಾಯಿ ಸೂಲಿಗೆ ಇಲ್ಲಿನ ಟೋಲ್ ಪದ್ಧತಿ, ಅದೇ ಕೇರಳದಲ್ಲಿ 5 ರಿಂದ 10 ರೂಪಾಯಿ ಟೋಲ್ ಪಡೆಯುತ್ತಿದ್ದು, ಅದರಲ್ಲೂ ಜಿಲ್ಲಾ ವಾಹನಗಳಿಗೆ ಯಾವುದೇ ವಿಧವಾಗಿ ಟೋಲ್ ಪಡೆಯುವುದಿಲ್ಲ. ಇದೇ ಮಾದರಿ ಕರ್ನಾಟಕದಲ್ಲೂ ಜಾರಿಯಾಗಲೀ, ಕೇಂದ್ರ ಸರ್ಕಾರ ನಿರ್ಧರಿಸುವ ಈ ವ್ಯವಸ್ಥೆಯಲ್ಲಿ ರಾಜ್ಯಕ್ಕೊಂದು ಪದ್ಧತಿ ಏಕೆ” ಎಂಬುದಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಪಡುಬಿದ್ರಿಯ ನಡೆದ ಸಾಸ್ತಾನ-ಹೆಜಮಾಡಿ ಹಾಗೂ ತಲಪಾಡಿ ಟೋಲ್ ಹೋರಾಟ ಸಮಿತಿಗಳ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.

“ಯಾವುದೇ ಅಧಿಕಾರಿಯಾಗಲೀ, ಜನಪ್ರತಿನಿಧಿಗಳಾಗಲೀ ಕಂಪನಿಗಳ ಕೈಗೊಂಬೆಯಂತೆ ವರ್ತಿಸಿದರೆ ನಾವು ಸುಮ್ಮನಿರೋಲ್ಲ. ಜನರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದರೂ ಅವರನ್ನು 144 ಸೆಕ್ಷನ್ ಹಾಕಿ ಬಂಧಿಸಿರುವುದು ಸ್ವಾತಂತ್ಯದ ಕಗ್ಗೊಲೆ, ವಿಧಾನ ಪರಿಷತ್ತಿನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಟೋಲ್ ವಿರುದ್ಧ ಧ್ವನಿ ಎತ್ತಿರುವುದು ಸ್ವಾಗರ್ತಾಹ, ಅವರಂತೆ ನಮ್ಮ ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಜನರ ಪರ ವಿಧಾನಸೌದದಲ್ಲಿ ಮಾತನಾಡುವ ಮೂಲಕ ಈ ಭಾಗದ ಜನರ ಧ್ವನಿಯಾಗಬೇಕಾಗಿದೆ” ಎಂದರು.