ದೈವಸ್ಥಾನಗಳಲ್ಲಿ ವೈದಿಕ ಸಂಸ್ಕಾರ ಬೇಡ : ಬಿಳಿಮಲೆ

`ಜನನುಡಿ’ ಸಮಾವೇಶದಲ್ಲಿ  ಪಡುಮಲೆ ವಿದ್ಯಮಾನ ಪ್ರಸ್ತಾಪ 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತುಳು ನಾಡಿನ ಕೆಚ್ಚೆದೆಯ ವೀರರಾದ ಕೋಟಿ ಚೆನ್ನಯರ ಕಾರ್ಯಗಳಿಗೆ ವಿರುದ್ಧವಾಗಿ ಭೂಮಾಲೀಕ ಬುದ್ಧಿವಂತನ ಆತ್ಮಕ್ಕೆ ಶಾಂತಿ ನೀಡುವ ಕೆಲಸಕ್ಕೆ ಕೋಟಿ ಚೆನ್ನಯರ ಬಿಲ್ಲವ ಸಮುದಾಯ ಮುಂದಾಗಿರುವುದು ಇಂದಿನ ಸಾಮಾಜಿಕ ವ್ಯವಸ್ಥೆಯ ದುರಂತ ಎಂದು ಹಿರಿಯ ಜಾನಪದ ವಿದ್ವಾಂಸ, ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ಕನ್ನಡ ಪೀಠದ ಮುಖ್ಯಸ್ಥ ಪುರುಷೋತ್ತಮ ಬಿಳಿಮಲೆ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ನಗರದಲ್ಲಿ `ಅಭಿಮತ ಮಂಗಳೂರು;’ ಆಶ್ರಯದಲ್ಲಿ ನಡೆದ ಜನನುಡಿ ಸಮಾವೇಶದ `ತುಳುನಾಡಿನ ಜನಪದ ಸಾಂಸ್ಕೃತಿಕ ಪರಂಪರೆಗಳು’ ಗೋಷ್ಟಿಯಲ್ಲಿ ಮಾತನಾಡಿದರು.

“ಸತ್ಯೊಡು ಬತ್ತಿನಕುಲೆಗ್ ತಿಗಲೆಡ್ ಸಾದಿ ಕೊರ್ಪ,  ಅನ್ಯಾಯೊಗು ಸುರಿಯೊಡು ಸಾದಿ ಕೊರ್ಪ (ಸತ್ಯವಂತರಿಗೆ ಹೃದಯಲ್ಲಿ ಸ್ಥಾನ ನೀಡುತ್ತೇವೆ, ಅನ್ಯಾಯ ಮಾಡಿದವರಿಗೆ ಕತ್ತಿಯಲ್ಲಿ ಉತ್ತರ ನೀಡುತ್ತೇವೆ) ಎಂದ ಕೋಟಿ ಚೆನ್ನಯರೆಂಬ ವೀರ ಪುರುಷರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಆದರೆ, ಇಂದು ಅವರು ಅನ್ಯಾಯದ ವಿರುದ್ಧ ಹೋರಾಟ ಮಾಡಿ ಕೊಂದು ಹಾಕಿದ ವ್ಯಕ್ತಿಯ ಆತ್ಮಕ್ಕೆ ಶಾಂತಿ ಮಾಡಬೇಕಾದವರು ಬಿಲ್ಲವರಲ್ಲ. ಇದು ನಮ್ಮ ಕರಾವಳಿಯಲ್ಲಿ ನಡೆಯುತ್ತಿರುವ ಸಾಮಾಜಿಕ ದುರಂತಗಳಲ್ಲಿ ಒಂದು” ಎಂದು ಬಿಳಿಮಲೆ ಅಭಿಪ್ರಾಯಪಟ್ಟರು.

ಕೋಟಿ ಚೆನ್ನಯರು ಸೇರಿದಂತೆ ಕೊರಗ ತನಿಯ, ತನ್ನಿ ಮಾನಿಗ, ಕಲ್ಲುರ್ಟಿ ಇತ್ಯಾದಿ ದೈವಗಳು ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿ ಬಲಿದಾನ ಮಾಡಿದವರು. ಅವರ ಅವಸಾನಕ್ಕೆ ಯಾರು ಕಾರಣರಾಗಿದ್ದರೊ ಅವರ ಗುಲಾಮಗಿರಿಗೆ ನಾವು ಬಲಿಯಾಗುತ್ತಿರುವುದು ವಿಪರ್ಯಾಸ ಎಂದವರು ನುಡಿದರು.

“ಅಂದಿನ ಕಾಲದಲ್ಲಿ ಯಾರ ವಿರುದ್ಧ ಹೋರಾಟ ನಡೆಸಿ ಮಾಯವಾಗಿ ಇಂದು ದೈವಗಳಾಗಿದ್ದರೊ ಅಂತಹವರನ್ನು ಬಲಪಂಥೀಯರು ಇಂದು ಗುಲಾಮರಾಗಿ ಮಾಡಿಕೊಳ್ಳುತ್ತಿದ್ದಾರೆ. ದೈವಸ್ಥಾನಗಳಲ್ಲಿ ವೈದಿಕ ಸಂಸ್ಕಾರಗಳಿಗೆ ಅವಕಾಶ ಇಲ್ಲ. ಪುರೋಹಿತರಿಗೆ ಪ್ರವೇಶ ಇಲ್ಲ. ಹಾಗಿದ್ದರೂ ಇಂದು ನಡೆಯುತ್ತಿರುವುದು ವ್ಯತಿರಿಕ್ತ ವಿದ್ಯಮಾನಗಳು” ಎಂದವರು ಹೇಳಿದರು.

“ದೈವಗಳು, ಯಕ್ಷಗಾನ ಮೂಢನಂಬಿಕೆಗಳು ಎಂದು ಪ್ರಗತಿಪರರು ನಿಲುವು ಹೊಂದಿರುವುದು ಸರಿಯಲ್ಲ. ದೈವಗಳ ಪಾಡ್ಧನಗಳು ನಮ್ಮ ಹಿರಿಯರ ಆತ್ಮಕಥನಗಳಾಗಿವೆ. ಅನ್ಯಾಯದ ವಿರುದ್ಧ ಹೋರಾಟ ನಡೆಸಿದ ನಮ್ಮ ಹಿರಿಯರ ಬಲಿದಾನದ ಕತೆಗಳು ಅವು. ಆದರೆ, ಇಂದು ಬಲಪಂಥೀಯ ಶಕ್ತಿಗಳು ಅವುಗಳನ್ನು ಕೂಡ ತಮ್ಮ ಗುಲಾಮ ವ್ಯವಸ್ಥೆಯೊಳಗೆ ತರುತ್ತಿರುವುದು ಮತ್ತೊಂದು ಸಾಮಾಜಿಕ ದುರಂತ” ಎಂದು ಬಿಳಿಮಲೆ ಖೇದ ವ್ಯಕ್ತಪಡಿಸಿದರು.

ಅನಂತರ ಕೊರಗ ಸಮುದಾಯದ ಮತ್ತಿತ್ತರ ದೈವಗಳ ಸಾಂಸ್ಕೃತಿ ಪ್ರದರ್ಶನ ನಡೆಯಿತು.