ಚೆಕ್ ಅಮಾನ್ಯಕ್ಕೆ ಕಠಿಣ ಶಿಕ್ಷೆ ಬೆದರಿಕೆ : ದಾವೆ ಬದಲು ಮಾತುಕತೆ ಉತ್ತಮ

ಕಪ್ಪು ಹಣವನ್ನು ಹೊರತರುವ ಹಾಗೂ ಕಾಳಧನಿಕರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 500 ರೂಪಾಯಿ, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ, ಹಣರಹಿತ ವಹಿವಾಟು ಯೋಜನೆ ಜಾರಿಗೆ ತರುತ್ತಿರುವುದು ಶ್ಲಾಘನೀಯ.

ಡಿ 26ರಂದು ಮಾಧ್ಯಮಗಳಲ್ಲಿ `ಚೆಕ್ ಬೌನ್ಸ್ ಆದರೆ ಕಠಿಣ ಸಜೆ’ ಎಂಬ ವರದಿ ನೋಡಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗೃಹಸಾಲ, ವೈಯಕ್ತಿಕ ಸಾಲ ಪಡೆಯಬೇಕೆಂದರೆ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಜತೆಗೆ ಸಹಿ ಮಾಡಿರುವ ಈ ಖಾಲಿ ಚೆಕ್ಕುಗಳನ್ನು ಭದ್ರತೆಗಾಗಿ ನೀಡಬೇಕು.

ಇತರೆ ಖಾಸಗಿ ಕಂಪೆನಿ ಫೈನಾನ್ಸ್ ಹಾಗೂ ಬಡ್ಡಿ ಲೇವಾದೇವಿದಾರರು ಸಾಲ ನೀಡುವ ಸಂದರ್ಭದಲ್ಲಿ ಈ ರೀತಿಯನ್ನು ಅನುಸರಿಸುತ್ತಾರೆ. ಒಂದು ತಿಂಗಳು ಅಥವಾ ಎರಡು ತಿಂಗಳು ಅನಿವಾರ್ಯ ಕಾರಣಗಳಿಂದ ಬಡ್ಡಿ ಪಾವತಿಸುವುದು ತಡವಾದಲ್ಲಿ ನೀಡಿರುವ ಖಾಲಿ ಚೆಕ್ಕನ್ನು ಬ್ರಹ್ಮಾಸ್ತ್ರವಾಗಿ ಬಳಸಿಕೊಂಡು ಕೊಡಬೇಕಾಗಿದ್ದ ಮೊತ್ತಕ್ಕೆ ಎಂಟು ಅಥವಾ ಹತ್ತಪಟ್ಟು ಮೊತ್ತವನ್ನು ಚೆಕ್ಕುಗಳಲ್ಲಿ ನಮೂದಿಸಿ ನ್ಯಾಯಾಲಯಗಳಲ್ಲಿ ದಾವೆ ಹೂಡುತ್ತಾರೆ. ನ್ಯಾಯಾಲಯ ಕೇಳುವ ಪ್ರಶ್ನೆ “ಈ ಚೆಕ್ ನಿಮ್ಮದೆ ? ಇದರಲ್ಲಿ ಇರುವ ಸಹಿ ನಿಮ್ಮದೆ ?” ಹೌದು ಎಂದರೆ ಮುಗಿಯಿತು. ಅವನಿಗೆ ಅಪರಾಧಿ ಎಂಬ ಪಟ್ಟ ಕಟ್ಟುತ್ತಾರೆ.

ಯಾವ ವ್ಯಕ್ತಿಯಾಗಲಿ ಚೆಕ್ ಮುಖಾಂತರ ವ್ಯವಹಾರ ನಡೆಸುವವರು ಇಂಗ್ಲಿಷಿನಲ್ಲಿ ಬರೆಯಲು ಯೋಗ್ಯರಾಗಿರುತ್ತಾರೆ. ಸಾಮಾನ್ಯರಾದರೆ ಕನ್ನಡದಲ್ಲಿ ಬರೆಯಲು ಯೋಗ್ಯರಾಗಿರುತ್ತಾರೆ. ಖಾಲಿ ಚೆಕ್ಕುಗಳಲ್ಲಿ ಕೊಟ್ಟವರ ಸಹಿಯನ್ನು ಹೊರತುಪಡಿಸಿದರೆ ಯಾವ ಬರವಣಿಗೆಯೂ ಇರುವುದಿಲ್ಲ. ಉಳಿದ ಬರವಣಿಗೆಯನ್ನು ಹಣ ಕೊಟ್ಟವರು ಮನ ಬಂದಂತೆ ಮೊತ್ತ ನಮೂದಿಸಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಈ ಅನ್ಯಾಯದಿಂದ ಜನಸಾಮಾನ್ಯರ ಮಾನಹಾನಿ, ಪ್ರಾಣಹಾನಿಯಾಗಿ ಜೈಲು ಸೇರಿ ಸಂಸಾರಗಳು ಹಾಳಾಗಿರುವ ನಿರ್ದಶನಗಳನ್ನು ನಾವು ನೋಡಿದ್ದೇವೆ.

ಹೀಗಾಗಿ ನೇರ ನ್ಯಾಯಾಲಯಗಳಲ್ಲಿ ದಾವೆ ಹಾಕುವ ಬದಲು ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಹಣ ಕೊಟ್ಟವರು ಹಣ ಪಡೆದವರು ಇಬ್ಬರು ಸೇರಿ ಇತ್ಯರ್ಥ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟರೆ ಸಾಮಾನ್ಯರಿಗೂ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ.

  • ಮೋಹನ್ ವಿ ಕರ್ಕೇರ, ಹೆಮ್ಮಾಡಿ-ತಲ್ಲೂರು