ಜಾತಿವ್ಯವಸ್ಥೆ ಮೇಲೆ ಮೋದಿ ಸರ್ಜಿಕಲ್ ದಾಳಿ ನಡೆಸಲಿ

ಜನನುಡಿ ಸಮಾರೋಪದಲ್ಲಿ ದಲಿತ ಚಿಂತಕ ಮಾಲಗತ್ತಿ ಸವಾಲು

ಮಂಗಳೂರು : ನೋಟು ಅಮಾನ್ಯದಂತಹ ಕ್ರಮ ಕೈಗೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತ ದೇಶದ ಜಾತಿ ವ್ಯವಸ್ಥೆಯ ವಿರುದ್ಧ ಸರ್ಜಿಕಲ್ ದಾಳಿ ನಡೆಸಿ ಜಾತಿ ತಾರತಮ್ಯ ತೊಡೆದು ಹಾಕಲಿ ಎಂದು ದಲಿತ ಚಿಂತಕ ಅರವಿಂದ ಮಾಲಗತ್ತಿ ಅವರು ಕೇಂದ್ರ ಸರಕಾರಕ್ಕೆ ಸವಾಲು ಹಾಕಿದ್ದಾರೆ.

“ಪ್ರಧಾನಿಯವರು ನೋಟು ಅಮಾನ್ಯವನ್ನು ಸರ್ಜಿಕಲ್ ದಾಳಿಗೆ ಹೋಲಿಸಿ ಮಾತನಾಡುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾತಿ ತಾರತಮ್ಯ ವಿರುದ್ಧ ಕೂಡ ಸರ್ಜಿಕಲ್ ಸ್ಟ್ರೈಕ್ ಮಾಡಲಿ. ಆದರೆ, ಅಂತಹ ನೀತಿಯೊಂದನ್ನು ಕೈಗೊಳ್ಳುವ ದಿಟ್ಟತನ ಅವರಿಗಿಲ್ಲ. ಇಂದಿನ ಭಾರತೀಯ ಪ್ರಜೆಗಳ ಮನಸ್ಥಿತಿಯಲ್ಲಿ ನೋಟು ಅಮಾನಯ ಮಾಡುವುದು ಸುಲಭ. ಆದರೆ, ಅವರು ಇರುವ ರಾಜಕೀಯ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ಹೋಗಲಾಡಿಸಲು ಅವರು ಮುಂದಾಗುವರೇ?” ಎಂದು ಮಾಲಗತ್ತಿ ಪ್ರಶ್ನಿಸಿದರು.

ಅವರು ಭಾನುವಾರ ಮಂಗಳೂರಿನ ಶಾಂತಿಕಿರಣದಲ್ಲಿ ನಡೆಯುತ್ತಿರುವ ಜನನುಡಿ ಸಾಹಿತ್ಯ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ದಿನೇಶ್ ಅಮೀನ್ ಮಟ್ಟು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಐಕ್ಯತೆ ಸಮಾನ ಮನಸ್ಕರಲ್ಲಿ ಮಾತ್ರ ಒಡಮೂಡುವಂಥದ್ದು ಎಂದ ಅವರು ಅದಕ್ಕೆ ಶರಣ ಚಳವಳಿ ಮೂಡಿಬಂದ ಉದಾಹರಣೆಯನ್ನು ನೀಡಿದರು. ಅಂತರ್ಜಾತಿ ವಿವಾಹಗಳಿಂದ ಜಾತಿ ವಿನಾಶ ಸಾಧ್ಯ ಎಂದ ಅವರು,  ಗಾಂಧಿ ಹೇಳಿದ ಲೋಟಾ, ರೋಟಿ, ಬೇಟಿ ಚಿಂತನೆಗಿಂತ ಅಂಬೇಡ್ಕರ್ ಸೂಚಿಸಿದ ಬೇಟಿ  ಅಂದರೆ ಹೆಣ್ಣುಮಕ್ಕಳನ್ನು ಅಂತರ್ಜಾತೀಯ ವಿವಾಹಕ್ಕೆ ಪೆÇ್ರೀತ್ಸಾಹಿಸುವುದು ಹೆಚ್ಚು ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟರು. ಅಂತರ್ಜಾತೀಯ ವಿವಾಹಕ್ಕೆ ಲೋಹಿಯಾ ನೀಡಿದ ಸಲಹೆಯನ್ನು ಉಲ್ಲೇಖಿಸುತ್ತಾ, ಸರ್ಕಾರೆ ಹುದ್ದೆಗಳನ್ನು ಅಂತರ್ಜಾತಿ ವಿವಾಹಿತರಿಗೆ ಮೀಸಲಿಟ್ಟರೆ ಜಾತಿರಹಿತ ಸಮಾಜ ಸೃಷ್ಟಿಗೆ ಸುಲಭವಾಗುತ್ತದೆ ಎಂದರು.

ಕೋಮುವಾದ ಇಂದು ಕರಾವಳಿಯನ್ನು ದಾಟಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮೊದಲಾದ ಕಡೆಗೂ ವಿಸ್ತರಿಸುತ್ತಿದೆ. ಇದರ ವಿರುದ್ಧ ನಾವು ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ. ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪರ್ಯಾಯ ರಾಜಕೀಯ ಶಕ್ತಿಯನ್ನು ರೂಪಿಸಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ವಿಲ್ಫ್ರೆಡ್ ಡಿಸೋಜ ಹೇಳಿದರು.

ಈಗೀಗ ಕೊರಗ ಸಮುದಾಯದವರನ್ನು ಕೂಡ ಸ್ವಾಮೀಜಿಗಳು ಇರುವ ವೇದಿಕೆಗೆ ಆಹ್ವಾನಿಸಲಾಗುತ್ತಿದೆ. ಹತ್ತು ನಿಮಿಷ ಮಾತನಾಡಲು ಅವಕಾಶ ನೀಡುತ್ತಾರೆ. ಸಮುದಾಯದ ಒಬ್ಬ ನಾಯಕನನ್ನು ವೇದಿಕೆಯ ಮೇಲೆ ಕೂರಿಸದ ಮಾತ್ರಕ್ಕೆ ಸಮಾನತೆ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಹಾಗೂ ದಕ್ಷಿಣ ಕನ್ನಡದ ಮೂಲನಿವಾಸಿಗಳಾದ ಕೊರಗ ಸಮುದಾಯ ವೈಚಾರಿಕತೆಯನ್ನು ದಕ್ಕಿಸಿಕೊಂಡು ಮುನ್ನಡೆಯಬೇಕೆಂಬ ಆಶಯ ನಮ್ಮದು ಎಂದು ಕೊರಗ ಸಮಾಜದ ಮುಖಂಡ ಬಾಲರಾಜ್ ಕೋಡಿಕಲ್ ಹೇಳಿದರು.

ಜನದ ಸಮಸ್ಯೆ ಮತ್ತು ನುಡಿಯ ಸಮಸ್ಯೆಯನ್ನ ಅರ್ಥಮಾಡಿಕೊಂಡಾಗ ಮಾತ್ರ ಸಮತೆ ಸಾಧ್ಯ. ನುಡಿ ಆಲಯವನ್ನು ದಾಟಿ ಬಯಲಿನ ಬೆಳಕಿನ ಬೀಜಗಳಾಗಬೇಕಾದ ಅಗತ್ಯವಿದೆ ಎಂದು ಜ್ಯೋತಿ ಚೇಳ್ಯಾರು ನುಡಿದರು.

ಅನಂತ ನಾಯಕ್ ಸಮಾರೋಪ ಕಾರ್ಯಕ್ರಮದ ನಿರ್ವಹಣೆ ಮಾಡಿದರು.