ಕುಡ್ಲ ಎಕ್ಸ್‍ಪ್ರೆಸ್ ರೈಲು ಉಪಯೋಗಕಾರಿಯಾಗಲು ಮಂಗಳೂರು ಸೆಂಟ್ರಲಿನಿಂದ ಬೆಂಗಳೂರು ಸಿಟಿಗೆ ಬಿಡಿ

ಸಾಂದರ್ಭಿಕ ಚಿತ್ರ

ಬಹುನಿರೀಕ್ಷೆಯ ಕುಡ್ಲ ಎಕ್ಸ್‍ಪ್ರೆಸ್ ರೈಲನ್ನು ನೇರವಾಗಿ ಮಂಗಳೂರು ಸೆಂಟ್ರಲ್‍ನಿಂದ ಬೆಂಗಳೂರು ಸೆಂಟ್ರಲ್ ರೈಲುನಿಲ್ದಾಣಕ್ಕೆ ಓಡಿಸಿದರೆ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿರುತ್ತದೆ.
ಮಂಗಳೂರು ಜಂಕ್ಷನ್-ಯಶವಂತಪುರ ನಡುವೆ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮತ್ತು ಯಶವಂತಪುರ-ಮಂಗಳೂರು ಜಂಕ್ಷನ್ ನಡುವೆ ಭಾನುವಾರ, ಮಂಗಳವಾರ, ಗುರುವಾರ ಓಡಾಡುವ ಈ ರೈಲು ಪ್ರಯಾಣದಲ್ಲಿ ಮೊದಲಿಗಿಂತ ಎರಡು ಗಂಟೆ ಸಮಯ ಉಳಿತಾಯವಾಯಿತಾದರೂ ಇದು ಎರಡೂ ಕಡೆಗಳ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲ. ಕಾರಣ, ಪರ ಊರುಗಳಿಂದ ಮಂಗಳೂರು ಮೂಲಕ ಬೆಂಗಳೂರಿಗೆ ಹಗಲು ಹೊತ್ತು ರೈಲಿನಲ್ಲಿ ಪ್ರಯಾಣ ಬಯಸುವ ಪ್ರಯಾಣಿಕರು, ಮಂಗಳೂರಿನಿಂದ ಐದಾರು ಕಿ ಮೀ ದೂರದಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಬರಲು ಬೆರಳೆಣಿಕೆ ನಗರ ಸಾರಿಗೆ ಬಸ್ಸುಗಳು ಇರುವುದರಿಂದ ಆಟೋ ರಿಕ್ಷಾದಲ್ಲಿ ಬರಲು 150ರಿಂದ 200 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇಲ್ಲವೇ ನಗರ ಸಾರಿಗೆ ಬಸ್ಸಿನಲ್ಲಿ ಪಡೀಲಿಗೆ ಬಂದು ಅಲ್ಲಿಂದ ಆಟೋ ರಿಕ್ಷಾದಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಬರಬೇಕಾಗುತ್ತದೆ. ಇದಕ್ಕಾಗಿ ಕನಿಷ್ಠ 60 ರೂಪಾಯಿ ವ್ಯಯವಾಗುತ್ತದೆ. ಈ ರೈಲು ರಾತ್ರಿ 8.30ಕ್ಕೆ ಯಶವಂತಪುರ ತಲುಪುತ್ತದೆ. ಅಲ್ಲಿಂದ ಇತರ ಊರುಗಳಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಮೆಜಸ್ಟಿಕ್ ತಲುಪಲು 200 ಖರ್ಚು ಮಾಡಬೇಕಾಗುತ್ತದೆ. ಅಂದರೆ, ಮಂಗಳೂರಿನಿಂದ ಬೆಂಗಳೂರು ತಲುಪಲು ಕನಿಷ್ಠ 500-600 ರೂಪಾಯಿ ವ್ಯಯಿಸಬೇಕಾಗುತ್ತದೆ. ಇಷ್ಟೇ ಹಣ ಖರ್ಚು ಮಾಡಿದರೆ ಯಾವುದೇ ಪ್ರಯಾಸವಿಲ್ಲದೆ ಬಸ್ಸುಗಳಲ್ಲಿ ಬೆಂಗಳೂರು-ಮಂಗಳೂರು ನಡುವೆ ಪ್ರಯಾಣಿಸಬಹುದು.
ಅದೇ ರೀತಿ ದೂರದ ಊರುಗಳಿಂದ ಬೆಂಗಳೂರು ಮೆಜಸ್ಟಿಕಿಗೆ ಬರುವ ಪ್ರಯಾಣಿಕರು ಯಶವಂತಪುರಕ್ಕೆ ಬಂದು ಮಂಗಳೂರು ತಲುಪಲೂ ಸಹ ಇಷ್ಟೇ ಖರ್ಚ ತಗಲುತ್ತದೆ. ಲಗೇಜ್ ಇದ್ದರಂತೂ ಇನ್ನೂ ಕಷ್ಟ.
ಆದ್ದರಿಂದ ಕುಡ್ಲ ಎಕ್ಸ್‍ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್‍ನಿಂದ ಬೆಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಓಡಿಸಿದರೆ ಪ್ರಯಾಣಿಕರಿಗೆ ತುಂಬಾ ಉಪಕಾರವಾದೀತು

  • ಜಿ ನಾಗೇಂದ್ರ  ಕಾವೂರು