ಜಯಾ ಸಾವು ಅಂತರರಾಷ್ಟ್ರೀಯ ಕೋರ್ಟಿನಿಂದ ತನಿಖೆಯಾಗಲಿ

ಜನಪರ ಯೋಜನೆಗಳ ರೂವಾರಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರು ಅಪೊಲೋ ಆಸ್ಪತ್ರೆಯಲ್ಲಿ ತೀವ್ರ ಹೃದಯಘಾತದಿಂದ ಡಿಸೆಂಬರ್ 5ರಂದು ನಿಧನ ಹೊಂದಿರುವುದಾಗಿ ಮಾಧ್ಯಮ ವರದಿ ಹೇಳುತ್ತವೆ. ಆದರೆ ಜಯಲಲಿತಾ ಸಾವಿನ ಬಗ್ಗೆ ಪುಂಖಾನುಪುಂಖ ವದಂತಿಗಳು ಚಲಾವಣೆಯಲ್ಲಿರುವುದರಿಂದ ಅವರ ಸಾವು ಅಸಹಜವೋ ಎನ್ನುವುದರ ಬಗ್ಗೆ ತನಿಖೆ ನಡೆಯಬೇಕಾಗಿದೆ.

ಕಳೆದ ಸೆಪ್ಟೆಂಬರ್ 22ರಂದು ಕೇವಲ ಜ್ವರ ಮತ್ತು ಬಳಲುವಿಕೆಗಾಗಿ ಮಾತ್ರ ಆಸ್ಪತ್ರೆ ಸೇರಿದ ಜಯಲಲಿತಾ ಸುಮಾರು 75 ದಿನಗಳಷ್ಟೂ ದೀರ್ಘಕಾಲ ಆಸ್ಪತ್ರೆಯಲ್ಲಿದ್ದೂ ಕೊನೆಗೆ ಹೆಣವಾಗಿ ಮರಳಿದ್ದು ದೊಡ್ಡ ದುರಂತ. ಜನರ ಸಂಶಯಗಳಿಗೂ ಬಹಳಷ್ಟು ಕಾರಣಗಳಿವೆ. 75 ದಿನಗಳಿಂದ ಆಸ್ಪತ್ರೆ ಸೇರಿದ ಜಯಲಲಿತಾರವರ ಆರೋಗ್ಯ ವಿಚಾರಿಸಲು ರಾಷ್ಟ್ರಮಟ್ಟದ ನಾಯಕರು ಆಗಮಿಸಿದರೂ ಅವರಿಗೆ ಸೇರಿದಂತೆ ಯಾರಿಗೂ ಜಯಲಲಿತಾ ಭೇಟಿಗೆ ಅವಕಾಶ ನೀಡಲಿಲ್ಲ. ಜಯಲಲಿತಾರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೆಡಿಕಲ್ ಬುಲೆಟಿನ್ ಹೇಳುತ್ತಲೇ ಇತ್ತು. ಸಹಜ ಸ್ಥಿತಿಯಲ್ಲಿರುವ ಜಯಲಲಿತಾರನ್ನು ನೋಡಲು ಯಾರಿಗೂ ಅವಕಾಶ ನೀಡದಿರಲು ಕಾರಣ ? ಕೇಂದ್ರ ಸರಕಾರ ತಮಿಳು ನಾಡು ಸರಕಾರ ಮತ್ತು ಅಪೋಲೋ ಆಸ್ಪತ್ರೆಯನ್ನು ವ್ಯಾಪಕ ತನಿಖೆಗೆ ಒಳಪಡಿಸಬೇಕು. ಸಾಮಾನ್ಯವಾಗಿ ರಾಷ್ಟ್ರಮಟ್ಟದ,  ಜನಪ್ರಿಯ ನಾಯಕರು ಆಸ್ಪತ್ರೆ ಸೇರುವಾಗ ಅವರ ದೈನಂದಿನ ಜೀವನ ವಿಚಾರಗಳು ಸಾರ್ವಜನಿಕರಿಗೆ  ಕೂತುಹಲದ ವಿಚಾರ ಆಗಿರುತ್ತದೆ.

ಜಯಲಲಿತಾರ ಸಾವು ಸಂಭವಿಸಿದ ಡಿಸೆಂಬರ್ 5ರಂದು ಹೈಡ್ರಾಮಾವೇ ನಡೆದು ಹೋಯಿತು. ಅವರ ಸಾವು ಯಾವಾಗ ಸಂಭವಿಸಿತು ಎನ್ನುವುದನ್ನು ಅಪೊಲೊ ಆಸ್ಪತ್ರೆ ಮರೆಮಾಚಿತು. ಆಸ್ಪತ್ರೆಯೊಳಗೆ ತಮಿಳುನಾಡು ಸಚಿವ ಸಂಪುಟದ ಸಭೆ ನಡೆಯಿತು. ರಾತ್ರೋ ರಾತ್ರಿ ಪಳನಿ ಸೇಲ್ವಂ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಎಲ್ಲವೂ ನಾಟಕೀಯ ಎನ್ನುವಂತೆ ಭಾಸವಾಯಿತು. ಒಟ್ಟಿನಲ್ಲಿ ಜಯಲಲಿತಾರ ಸಾವಿನಲ್ಲಿ ಎಐಡಿಎಂಕೆ ಪಾತ್ರವೇನು ? ಜಯರ ಆಪ್ತ ಸ್ನೇಹಿತೆ ಎಂದು ಕರೆಸಿಕೊಳ್ಳುವ ಶಶಿಕಲಾ ಪಾತ್ರವೇನು ?

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ತಮಿಳುನಾಡಿನಬಲ್ಲಿ ಭರ್ಜರಿ ಪ್ರಚಾರ ನಡೆಸಿಯೂ ಏನನ್ನೂ ಸಾಧಿಸಲು ಸಾಧ್ಯವಾಗಲಿಲ್ಲ. ಬಿಜೆಪಿ ಚಿಂತನೆಗೂ ಜಯಲಲಿತಾ ಚಿಂತನೆಗೂ ಬಹಳಷ್ಟು ಸಾಮ್ಯತೆ ಇದೆ. ಆದರೆ ಎಂದೂ ಜಯಲಲಿತಾ ಬಿಜೆಪಿ ಜತೆ ಹೊಂದಾಣಿಕೆ ಮಾಡಿಲ್ಲ. ಜಯಲಲಿತಾ ಸಾವಿನ ನಂತರ ಬಿಜೆಪಿ ತಮಿಳುನಾಡು ರಾಜಕಾರಣದತ್ತ ವಿಶೇಷ ಗಮನಹರಿಸಿರುವುದನ್ನು ಗಮನಿಸಿದರೆ ಬಿಜೆಪಿಯತ್ತ ಕೂಡಾ ಸಂಶಯ ಬರುತ್ತದೆ. ಎಲ್ಲ ಸಂಶಯ ನಿವಾರಣೆಗೆ ಸಿಬಿಐನಿಂದ ಸಾಧ್ಯವಿಲ್ಲ. ಸಿಬಿಐ ಇಂದೂ ನಿಷ್ಪಕ್ಷಪಾತವಾಗಿಲ್ಲ. ಆದ್ದರಿಂದ ತಕ್ಷಣ ಇಡೀ ಪ್ರಕರಣವನ್ನು ಅಂತರರಾಷ್ಟ್ರೀಯ ತನಿಖೆಗೆ ಒಳಪಡಿಸಬೇಕು.

  • ವಿಶಾಂತ್ ಡಿ ಸೋಜ, ಮಂಗಳೂರು