`5 ತಿಂಗಳವರೆಗೆ ಬ್ಯಾಂಕ್, ಎಟಿಎಂಗಳಲ್ಲಿ ಹಣದ ಕೊರತೆಯಿರಲಿದೆ ‘

ಕೋಲ್ಕತಾ : ದೇಶ ದಲ್ಲಿರುವ ನಾಲ್ಕೂ ರಿಸರ್ವ್ ಬ್ಯಾಂಕ್‍ಗಳು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಿದರೂ ನಾಲ್ಕರಿಂದ ಐದು ತಿಂಗಳಗಳ ಕಾಲ ನಗದು ಹಣದ ಬಿಕ್ಕಟ್ಟು ಮುಂದುವರಿಯಲಿದೆ ಎಂದು ಬ್ಯಾಂಕ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಇಂಡಿಯಾ ಹೇಳಿದೆ.

ಪ್ರಧಾನಿ ಮೋದಿ 50 ದಿನಗಳಲ್ಲಿ ಜನತೆಗೆ ಎದುರಾಗಿರುವ ಬಿಕ್ಕಟ್ಟು ಪರಿಹಾರವಾಗಲಿದೆ ಎಂದು ಹೇಳಿಕೆ ನೀಡಿದ್ದರೆ, ಐದು ತಿಂಗಳುಗಳವರೆಗೆ ಬಿಕ್ಕಟ್ಟು ಬಗೆಹರಿಯಲು ಸಾಧ್ಯವಿಲ್ಲ ಎಂದು ಫೆಡರೇಶನ್ ಸ್ಪಷ್ಟಪಡಿಸಿದೆ.

ಡಿಸೆಂಬರ್ 1ರ ನಂತರ ಸರಕಾರಿ, ಖಾಸಗಿ ನೌಕರರು ವೇತನ ಪಡೆಯಲು ಬ್ಯಾಂಕ್‍ಗಳಿಗೆ ಮುಗಿಬೀಳುವುದರಿಂದ ಬ್ಯಾಂಕ್ ಸಿಬ್ಬಂದಿ ಮತ್ತು ಜನತೆ ತುಂಬಾ ಸಂಕಷ್ಟದ ಸ್ಥಿತಿ ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.

ದೇಶದಲ್ಲಿರುವ ನಾಲ್ಕು ರಿಸರ್ವ್ ಬ್ಯಾಂಕ್‍ಗಳಉ ದಿನದ 24 ಗಂಟೆಗಳ ಕಾಲ ನೋಟುಗಳ ಮುದ್ರಣ ಮಾಡಿದರೂ ಐದು ತಿಂಗಳುಗಳವರೆಗೆ ಬ್ಯಾಂಕ್‍ಗಳ ನಗದು ಹರಿವಿಕೆ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವಿಲ್ಲ ಎಂದು ಬಿಇಎಫ್‍ಐ ಪ್ರಧಾನ ಕಾರ್ಯದರ್ಶಿ ಪಿ ಕೆ ಬಿಸ್ವಾಸ್ ತಿಳಿಸಿದ್ದಾರೆ.

ನೋಟು ನಿಷೇಧದ ನಂತರ ನಗದು ಹಣದ ಕೊರತೆಯಿಂದಾಗಿ ಆಕ್ರೋಶಗೊಂಡ ಗ್ರಾಹಕರು ಸರಕಾರಿ ಸ್ವಾಮ್ಯದ ಮತ್ತು ಖಾಸಗಿ ಕ್ಷೇತ್ರಕ್ಕೆ ಸೇರಿದ ಅನೇಕ ಬ್ಯಾಂಕ್‍ಗಳನ್ನು ಧ್ವಂಸಗೊಳಿಸಿದ್ದಾರೆ. ಇದರಿಂದ ಕೆಲ ಬ್ಯಾಂಕ್‍ಗಳು ಕಾರ್ಯನಿರ್ವಹಿಸಲು ಹೆದರುತ್ತಿವೆ ಎಂದು ತಿಳಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ದೇಶದಲ್ಲಿ 500 ರೂ ಮುಖಬೆಲೆಯ 15,707 ಮಿಲಿಯನ್ ನೋಟುಗಳು ಮತ್ತು 1000 ರೂ.ಗಳ 6326 ಮಿಲಿಯನ್ ನೋಟುಗಳು ಚಲಾವಣೆಯಲ್ಲಿದ್ದವು ಎಂದು ಫೆಡರೇಶನ್ ತಿಳಿಸಿದೆ.

ಮುಂಬರುವ ವಾರಗಳಲ್ಲಿ ಒಂದು ವೇಳೆ ಗ್ರಾಹಕರು ಬ್ಯಾಂಕ್ ಮತ್ತು ಎಟಿಎಂಗಳಿಂದ ವೇತನದ ಹಣ ಪಡೆಯುವಲ್ಲಿ ವಿಫಲವಾದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗಿ ಬರುತ್ತದೆ ಎಂದು ಬ್ಯಾಂಕ್ ತಿಳಿಸಿದ್ದಾರೆ.