ನೋಟು ರದ್ದತಿ ಎಫೆಕ್ಟ್ : ಸಿನಿಮಾಗಳಿಗೆ ಜನರಿಲ್ಲ

ಬೆಂಗಳೂರು : ಪ್ರಧಾನಿ ಮೋದಿ ನೋಟು ಅಮಾನ್ಯಗೊಳಿಸಿದ ಬಳಿಕ ಬಹುತೇಕ ಎಲ್ಲಾ ರಂಗಗಳಿಗೂ ಹೊಡೆತ ಬಿದ್ದಿದ್ದು, ಬೆಂಗಳೂರಿನ ಚಿತ್ರ ಮಂದಿರಗಳು ಸೇರಿದಂತೆ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲೂ ಕಲೆಕ್ಷನ್ ಖೋತಾ ಆಗಿದೆ.

“ನೋಟು ಅಮಾನ್ಯಗೊಳಿಸಿ ಎರಡು ವಾರ ಕಳೆದರೂ ಇನ್ನೂ ಕೂಡಾ ಚಿತ್ರ ಮಂದಿರಗಳಿಗೆ ಜನ ಬರುತ್ತಿಲ್ಲ. ಕಲೆಕ್ಷನ್ ಮೊದಲ ಮಟ್ಟಕ್ಕೆ ಬರುತ್ತಿಲ್ಲ” ಎಂದು ಚಿತ್ರಮಂದಿರದ ಮಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

“ಈ ಮುಂಚೆ ಸಿಂಗಲ್ ಸ್ಕ್ರೀನ್ ಚಿತ್ರ ಮಂದಿರಗಳಲ್ಲಿ ಆನ್‍ಲೈನ್ ಮೂಲಕ ಟಿಕೆಟ್ ಬಿಕರಿಯಾಗುತ್ತಿತ್ತು. ಆದರೆ ಅದೀಗ ಕಡಿಮೆಯಾಗಿದೆ. ಚಿಲ್ಲರೆ ಅಭಾವದಿಂದಾಗಿ ಯಾರೂ ಕೂಡಾ ಚಿತ್ರಮಂದಿರಕ್ಕೆ ಬರುತ್ತಿಲ್ಲ. ವಿಶೇಷವಾಗಿ 100 ರೂ ನೋಟು ಅಭಾವ ಎಲ್ಲರಲ್ಲೂ ಕಾಡುತ್ತಾ ಇದೆ. ಟಿಕೆಟ್ ಸಾಮಾನ್ಯವಾಗಿ 100 ರೂ ಆಸುಪಾಸಿನಲ್ಲೇ ಇರುವುದರಿಂದ ದೊಡ್ಡ ಮೊತ್ತದ ನೋಟುಗಳನ್ನು ತಂದರೂ ಇಲ್ಲೂ ಚಿಲ್ಲರೆ ಅಭಾವ ಕಾಡುತ್ತಿದೆ. 100 ರೂ  ನೋಟುಗಳಿಗೆ ಸಹಜವಾಗಿಯೇ ಡಿಮ್ಯಾಂಡ್ ಕುದುರಿದೆ. ಹೀಗಾಗಿ ಕೇವಲ ಬೆರಳೆಣಿಕೆ ಮಂದಿ ಚಿತ್ರ ಮಂದಿರಕ್ಕೆ ಬರುತ್ತಿದ್ದಾರೆ. ಕಲೆಕ್ಷನ್ ಏನೂ ಇಲ್ಲ” ಎಂದು ನೋವು ವ್ಯಕ್ತಪಡಿಸುತ್ತಿದ್ದಾರೆ ಚಿತ್ರ ಮಂದಿರದ ಮಾಲಕರು.