ದ ಕ ಜಿಲ್ಲೆಯಲ್ಲಿ ಎಚ್ ಐ ವಿ ಪಾಸಿಟಿವ್ ಪ್ರಕರಣ ಇಳಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೋರಿಸುವ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಎಚ್ ಐ ವಿ ಪ್ರಕರಣಗಳು ಇಳಿಕೆಯಾಗಿರುವುದು ಕಂಡುಬಂದಿದೆ.

ಅಕ್ಟೋಬರ್ ತಿಂಗಳವರೆಗೆ ಪರೀಕ್ಷಿಸಲಾದ ಒಟ್ಟು 22,719 ಗರ್ಭಿಣಿ ಮಹಿಳೆಯಲ್ಲಿ ಕೇವಲ 14 ಮಂದಿ ಮಹಿಳೆಯರಲ್ಲಿ ಎಚ್ ಐ ವಿ ಸೋಂಕು ಕಂಡುಬಂದಿದೆ. ಇತರ 36,727 ಮಂದಿ  ಪರೀಕ್ಷಿತರಲ್ಲಿ 523 ಮಂದಿ ಎಚ್ ಐ ವಿ ಪಾಸಿಟಿವ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಡಾ ರಾಮಕೃಷ್ಣ ರಾವ್ ಹೇಳಿದ್ದಾರೆ.

ಎಚ್ ಐ ವಿ ಜಾಗೃತಿ ಅಭಿಯಾನಗಳು, ಕಾಲಕಾಲಕ್ಕೆ ಸಲಹೆಗಳು ಮತ್ತು ಇತರ ಪರಿಹಾರೋಪಾಯಗಳು ಎಚ್ ಐ ವಿ ಪ್ರಕರಣ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿ 2007ರಿಂದ ಎಚ್‍ಐವಿ/ ಏಡ್ಸ್ ಪ್ರಕರಣಗಳು ಇಳಿಕೆಯಾಗುತ್ತಾ ಬಂದಿದೆ. ಅನೇಕ ಸರ್ಕಾರೇತರ ಸಂಘಟನೆಗಳು ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿವೆ. ಅದೇ ರೀತಿ ಎಚ್ ಐ ವಿ ಸೋಂಕಿತರು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಾ ಬಂದಿದ್ದಾರೆ.

2007ರಲ್ಲಿ 1,327 ಮಂದಿ ಎಚ್ ಐ ವಿ ಪಾಸಿಟಿವ್ ಪ್ರಕರಣ, 2008ರಲ್ಲಿ 1169 ಪ್ರಕರಣ, 2009ರಲ್ಲಿ 1064 ಪ್ರಕರಣ, 2010ರಲ್ಲಿ 967 ಪ್ರಕರಣ, 2011ರಲ್ಲಿ 867, 2013ರಲ್ಲಿ 686, 2014ರಲ್ಲಿ 674 ಮತ್ತು 2015ರಲ್ಲಿ 607 ಪ್ರಕರಣಗಳು ಕಂಡುಬಂದಿವೆ.

 

ಜಿಲ್ಲೆಯಲ್ಲಿ ಒಟ್ಟು 3,348 ಹೆಚ್‍ಐವಿ ಸೋಂಕಿತರು ಆ್ಯಂಟಿರಿಟ್ರೋವೈರಲ್ ಥೆರಪಿಗೆ ಒಳಪಡುತ್ತಿದ್ದು, ಇವರಲ್ಲಿ 1,709 ಮಂದಿ ಪುರುಷರು, 1,335 ಮಂದಿ ಮಹಿಳೆಯರು ಮತ್ತು 304 ಮಂದಿ 15 ವರ್ಷಕ್ಕಿಂತ ಕೆಳಗಿನ ಮಕ್ಕಳು. ಜಿಲ್ಲೆಯಲ್ಲಿ ಒಟ್ಟು 9,052 ಎಚ್ ಐ ವಿ ಸೋಂಕಿತರಿದ್ದಾರೆ ಎಂಬುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.