ಸಿದ್ದಾಪುರದಲ್ಲಿ ಚಿರತೆ ಸೆರೆ

ನಮ್ಮ ಪ್ರತಿನಿಧಿ ವರದಿ

ಸಿದ್ದಾಪುರ : ಇಲ್ಲಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯತ ವ್ಯಾಪ್ತಿಯ ಓಣಿತೋಟದ ಅಡವಿಯಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಸೋಮವಾರ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಮೂಲಕ ಹಿಡಿದರು.
ತೀವ್ರ ಗಾಯಗೊಂಡು ನಿತ್ರಾಣವಾಗಿದ್ದ ಚಿರತೆಯನ್ನು ಶಿವಮೊಗ್ಗದ ಅರವಳಿಕೆ ತಜ್ಞ ಡಾ ವಿನಯ ಎಸ್ ಅರವಳಿಕೆ ಇಂಜಕ್ಷನ್ ನೀಡುವ ಮೂಲಕ ಪ್ರಜ್ಞೆ ತಪ್ಪಿಸಿದರು. ನಂತರ ಬೋನಿನಲ್ಲಿ ಬಂಧಿಸಿ ಬೆಂಗಳೂರಿನ ಬನ್ನೇರುಘಟ್ಟದ ಸಫಾರಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಯಿತು.
“ಸುಮಾರು 3-4 ವರ್ಷ ಪ್ರಾಯದ ಈ ಚಿರತೆಯ ಬೆನ್ನುಮೂಳೆಗೆ ಪೆಟ್ಟು ಬಿದ್ದಿರುವ ಕಾರಣ ದೇಹದ ಹಿಂದಿನ ಭಾಗ ನಿಷ್ಕ್ರಿಯವಾಗಿದೆ. ಇನ್ನೊಂದು ಪ್ರಾಣಿಯ ಜೊತೆ ಹೋರಾಟದಲ್ಲಿ ಅಥವಾ ಜಿಗಿಯುವಾಗ ಆಯ ತಪ್ಪಿ ಬಿದ್ದಿರುವುದರಿಂದಾಗಲಿ ಪೆಟ್ಟುಬಿದ್ದಿರುವ ಸಾಧ್ಯತೆ ಇದ್ದು,ಸ್ಟ್ರೋಕ್ ಹೊಡೆದಿರುವ ಸಾಧ್ಯತೆಯೂ ಇದೆ. ಹೆಚ್ಚಿನ ಚಿಕಿತ್ಸೆಯಿಂದ ಬದುಕುವ ಸಾಧ್ಯತೆ ಇದೆ. ಚಿಕಿತ್ಸೆ ನೀಡುವ ಸೌಲಭ್ಯ ಬನ್ನೇರುಘಟ್ಟದ ಸಫಾರಿಯಲ್ಲಿದ್ದು ಆದ್ದರಿಂದ ಅಲ್ಲಿಗೆ ಕಳುಹಿಸಲಾಗುತ್ತಿದೆ” ಎಂದು ಅರವಳಿಕೆ ತಜ್ಞ ಡಾ ವಿನಯ ತಿಳಿಸಿದರು.