ಪುಚ್ಚೆಮೊಗರಿನಲ್ಲಿ ಚಿರತೆ ಪ್ರತ್ಯಕ್ಷ

ಚಿರತೆ ಹಿಡಿಯಲು ಬೋನ್ ಇರಿಸಿದ ಅರಣ್ಯ ಇಲಾಖೆ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಹೊಸಬೆಟ್ಟು ಸಮೀಪದ ಪುಚ್ಚಮೊಗರು ಶಾಂತಿರಾಜ್ ಕಾಲೊನಿ ಬಳಿ ಮಂಗಳವಾರ ರಾತ್ರಿ ಚಿರತೆಯೊಂದು ಕಾಣಿಸಿಕೊಂಡು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಸುದ್ದಿ ತಿಳಿದು ಅರಣ್ಯಾಧಿಕಾರಿಗಳು ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಚಿರತೆಯನ್ನು ಸೆರೆಹಿಡಿಯಲು ಸ್ಥಳದಲ್ಲಿ ಬೋನ್ ಇರಿಸಿದ್ದಾರೆ. ಅಧಿಕಾರಿಗಳ ಜತೆ ಶಾಸಕ ಅಭಯಚಂದ್ರ ಜೈನ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅರಣ್ಯ ಸಂರಕ್ಷಣಾಧಿಕಾರಿ ಹೆಚ್ ಆರ್ ಸುಬ್ರಹ್ಮಣ್ಯ, “ಕಾಡು ಪ್ರದೇಶಗಳಾಗಿರುವುದರಿಂದ ಪ್ರಾಣಿಗಳು ಇರುವುದು ಸಹಜ. ಚಿರೆತೆಯನ್ನು ಸೆರೆ ಹಿಡಿಯಲು ವ್ಯವಸ್ಥೆ ಮಾಡಲಾಗಿದೆ” ಎಂದರು.

ಇತ್ತೀಚೆಗೆ ಕಲ್ಲಬೆಟ್ಟು ಕರಿಂಜೆ ಪ್ರದೇಶದಲ್ಲಿ ಓಡಾಡುತ್ತಿದ್ದ ಚಿರತೆ ಅಲ್ಲಿ ಎರಡು ಹಸುಗಳನ್ನು ತಿಂದು ಸಾರ್ವಜನಿರಕ ಆತಂಕಕ್ಕೆ ಕಾರಣವಾಗಿತ್ತು. ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮೂರ್ನಾಲ್ಕು ಕಡೆ ಬೋನ್ ಇರಿಸಿದ್ದರು ಚಿರತೆಯನ್ನು ಹಿಡಿಯಲು ಸಾಧ್ಯವಾಗಿಲ್ಲ. ಒಂದು ಕಡೆ ಕಾಣಿಸಿಕೊಳ್ಳುವ ಚಿರತೆ 40ರಿಂದ 50 ಕಿ ಮೀ ವ್ಯಾಪ್ತಿಯಲ್ಲಿ ಸಂಚರಿಸುತ್ತದೆ. ಹಿಂದೆ ಕಲ್ಲಬೆಟ್ಟು ಪರಿಸರದಲ್ಲಿ ಕಾಣಿಸಿಕೊಂಡಿದ್ದ ಚಿರತೆಯೆ ಈಗ ಪುಚ್ಚೆಮೊಗರಿನಲ್ಲಿ ಓಡಾಡುತ್ತದೆ ಎನ್ನಲಾಗಿದೆ.