ಪಾದೂರಿನಲ್ಲಿ ಚಿರತೆ ಮರಿ ಹಿಡಿದ ಸ್ಥಳೀಯ ಯುವಕರು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಪಾದೂರು ಪರಿಸರದಲ್ಲಿ ಅಡ್ಡಾಡುತ್ತಿದ್ದ ಚಿರತೆಯ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅವರು ನಿರ್ಲಕ್ಷ್ಯ ತೋರಿದ್ದರಿಂದ ಬುಧವಾರ ಸ್ವತಃ ಕಾರ್ಯಾಚರಣೆಗಿಳಿದ ಯುವಕರ ತಂಡ ಪೊದೆಯಲ್ಲಿ ಅಡಗಿದ್ದ ಚಿರತೆ ಮರಿಯನ್ನು ಹಿಡಿದು ಪಕ್ಕದ ಐ ಎಸ್ ಪಿ ಆರ್ ಎಲ್ ಪ್ರದೇಶದಲ್ಲಿದ್ದ ಬೋನಿನಲ್ಲಿ ಬಂಧಿಸಿದ್ದಾರೆ.

ಪಕ್ಕದ ಗುಡ್ಡ ಪ್ರದೇಶದಲ್ಲಿ ಬೃಹತ್ ಚಿರತೆಯೊಂದು ಅಡ್ಡಾಡುತ್ತಿರುವುದನ್ನು ಸ್ಥಳೀಯ ಬಹಳಷ್ಟು ಮಂದಿ ಗಮನಿಸಿದ್ದು, ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೂ ತಂದಿದ್ದರು. ಈ ಬಗ್ಗೆ ಸ್ಥಳೀಯ ಕಂಪನಿಯ ಗಮನಕ್ಕೆ ತಂದಾಗ ಅವರು ಬೋನೊಂದನ್ನು ತಂದು ಆ ಗುಡ್ಡ ಪ್ರದೇಸದಲ್ಲಿ ಇಟ್ಟಿದ್ದರೂ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಇದೀಗ ಆ ಬೋನಿಗೆ ಈ ಚಿರತೆ ಮರಿಯನ್ನು ಹಾಕಿದ್ದು, “ಅದರ ಕೂಗಿನ ಸದ್ದಿಗೆ ದೊಡ್ಡ ಚಿರತೆ ಬರುವ ಸಾಧ್ಯತೆ ಇದೆ” ಎಂಬುದಾಗಿ ಆ ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ತಿಳಿಸಿದ್ದರಿಂದ ಇಂದು ರಾತ್ರಿ ಆ ಚಿರತೆ ಮರಿ ಬೋನಿನಲ್ಲಿ ಬಂಧಿಯಾಗಿ ಒಂದು ದಿನ ಈ ಪ್ರದೇಶದಲ್ಲಿ ಇರ ಬೇಕಾಗಿದ್ದು, ನಾಳೆ ಅದನ್ನು ಬೇರೆಡೆಗೆ ವರ್ಗಾಯಿಸುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಅಪಾಯಕಾರಿಯಾಗಿರುವ ಮತ್ತೊಂದು ಬೃಹತ್ ಚಿರತೆ ಬಂಧಿಯಾಗದ ಹೊರತು ಸ್ಥಳೀಯ ಜನರು ಆತಂಕದಲ್ಲಿ ದಿನ ಕಳೆಯುವುದು ಅನಿವಾರ್ಯವಾಗಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ತಮ್ಮ ಕರ್ತವ್ಯ ಅರಿತು ವ್ಯವಹರಿಸಬೇಕಾಗಿದೆ ಎಂಬುದು ಸ್ಥಳೀಯರ ಮಾತು.