ಅಪೋಲೋ ಆಸ್ಪತ್ರೆ ಸರ್ವರ್ ಮೇಲೆ ಹಿಡಿತವಿದೆ ಎಂದ ಲೀಜನ್

ಸಾಂದರ್ಭಿಕ ಚಿತ್ರ

`ಮಾಹಿತಿ ಬಹಿರಂಗಗೊಂಡರೆ  ರಾದ್ಧಾಂತ’

ವಾಷಿಂಗ್ಟನ್ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮದ್ಯ ದೊರೆ ವಿಜಯ್ ಮಲ್ಯ ಟೀವಿ ಪತ್ರಕರ್ತರಾದ ಬರ್ಖಾದತ್ತ್ ಮತ್ತು ರವೀಶ್ ಕುಮಾರ್ ಅವರ ಟ್ವಿಟ್ಟರ್ ಖಾತೆಗಳಿಗೆ ಕನ್ನ ಹಾಕಿದ ಹ್ಯಾಕರುಗಳ ಗುಂಪು  ಲೀಜನ್, ಇದೀಗ ಸ್ಫೋಟಕ ವಿಚಾರವೊಂದನ್ನು ಹೊರಗೆಡಹಿದೆ.

ಸೋಮವಾರದಂದು ಎನ್ಕ್ರಿಪ್ಟೆಡ್ ಇನಸ್ಟೆಂಟ್ ಮೆಸೇಜಿಂಗ್ ಸಾಫ್ಟ್ಟವೇರ್ ಮುಖಾಂತರ `ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ, ತನಗೆ ಅಪೋಲೋ ಆಸ್ಪತ್ರೆಯಂತಹ ಸರ್ವರುಗಳ ಮೇಲೆ ಕೂಡ ಹಿಡಿತವಿದ್ದು  ಆ ಸರ್ವರುಗಳ ಮಾಹಿತಿಯನ್ನು  ಬಹಿರಂಗಗೊಳಿಸಬೇಕೋ ಅಥವಾ ಬೇಡವೋ ಎಂಬ ಸಂದಿಗ್ಧತೆಯಲ್ಲಿ ತಾನಿದ್ದು  ಆ ಮಾಹಿತಿ ಬಿಡುಗಡೆಗೊಳಿಸಿದಲ್ಲಿ ಭಾರತದಲ್ಲಿ  ದೊಡ್ಡ ರಾದ್ಧಾಂತವೇ ಸೃಷ್ಟಿಯಾಗಬಹುದು ಎಂದು ಲೀಜನ್ ಹೇಳಿಕೊಂಡಿದೆ.

“ಕೆಲ ವಾರಗಳ ಹಿಂದೆ ತನಕ ಲೀಜನ್ ರಾಜಕೀಯ ಡಾಟಾ ಬಗ್ಗೆ ಆಸಕ್ತವಾಗಿರಲಿಲ್ಲ. ತಾನು ಸಂಗ್ರಹಿಸಿದ ಎಲ್ಲಾ ವಿಧಗಳ ಮಾಹಿತಿ ಭಂಡಾರದಲ್ಲಿ  ಭಾರತದ ಗಣ್ಯರಿಗೆ ಸಂಬಂಧಪಟ್ಟಂತೆ ಹಲವು ಗಿಗಾಬೈಟ್ ಮಾಹಿತಿಯನ್ನು ಗುರುತಿಸಲಾಗಿದೆ” ಎಂದು  ಲೀಜನ್ ಸಿಬ್ಬಂದಿ ಎಲ್ ಸಿ ಎಂದು ಗುರುತಿಸಲ್ಪಟ್ಟ ಯೂಸರ್ ಒಬ್ಬ ಹೇಳಿದ್ದನ್ನು ವಾಷಿಂಗ್ಟನ್ ಪೋಸ್ಟ್ ಉಲ್ಲೇಖಿಸಿದೆ.

“ಇಷ್ಟೊಂದು ಮಾಹಿತಿಯನ್ನು ಅವರು ಹೇಗೆ ಸಂಗ್ರಹಿಸಿದರೆಂಬ ಪ್ರಶ್ನೆಗೆ ಆತ ಅಸ್ಪಷ್ಟ ಉತ್ತರ ನೀಡಿದ್ದು ತಮಗೆ  ಭಾರತದಲ್ಲಿನ 40,000ಕ್ಕೂ ಹೆಚ್ಚು ಸರ್ವರುಗಳ ಮಾಹಿತಿ ಪಡೆಯಲು ಸಾಧ್ಯವಾಗಿದ್ದರಿಂದ ಅವುಗಳಲ್ಲಿ ಸ್ವಾರಸ್ಯಕರ ಮಾಹಿತಿಯನ್ನು ಕಲೆ ಹಾಕಲು ಸಾಧನವೊಂದನ್ನು ಸಿದ್ಧಪಡಿಸಬಾರದೇಕೆ ಎಂದು ನಿರ್ಧರಿಸಲಾಗಿತ್ತು ಎಂದು ಆತ ತಿಳಿಸಿದ್ದ” ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ವಿದೇಶಾಂಗ ವ್ಯವಹಾರಗಳ ಬಗ್ಗೆ ಬರೆಯುವ ಮ್ಯಾಕ್ಸ್ ಬೇರಕ್ ಹೇಳಿದ್ದಾರೆ.

“ತಾವು ಕಂಡು ಹಿಡಿದಿದ್ದನ್ನೆಲ್ಲಾ ಬಿಡುಗಡೆಗೊಳಿಸುವ ಉದ್ದೇಶ ತಮಗಿದೆ ಎಂದು ಆತ ಹೇಳಿದ. ಬರ್ಖಾ ಅವರ ಟ್ವಿಟ್ಟರ್ ಖಾತೆಯಿಂದ ಅವರು ಆಕೆಯ ಇಮೇಲುಗಳ 1.2 ಜಿಬಿಯಷ್ಟು  ಡಾಟಾ ಡಂಪ್ ತಯಾರಿಸಿ ಅದಕ್ಕೆ ಲಿಂಕ್ ಒಂದನ್ನು ಶೇರ್ ಮಾಡಿದ್ದರು” ಎಂದು ಬೇರಕ್ ಹೇಳಿದ್ದಾರೆ.

“ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿಯನ್ನು ತನ್ನ ಮುಂದಿನ ಗುರಿಯಾಗಿಸುವುದಾಗಿ ಲೀಜನ್ ಎಚ್ಚರಿಕೆ ನೀಡಿದೆ. “ತಮ್ಮ ಮುಂದಿನ ಗುರಿ ದೊಡ್ದದಾಗಿದೆ ಎಂದು ಎಲ್ ಸಿ  ಹೇಳಿಕೊಂಡಿದ್ದಾನೆ” ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಹಲವರ ಟ್ವಿಟ್ಟರ್ ಖಾತೆಗಳಿಗೆ ಕನ್ನ ಹಾಕಿರುವ ಈ ಹ್ಯಾಕರುಗಳ ಗುಂಪು ತಾನು ಈ ನಿಟ್ಟಿನಲ್ಲಿ ಮುಂದಿನ ವಾರಗಳಲ್ಲಿ ಇನ್ನಷ್ಟು ಮಾಡುವುದಾಗಿ ಹೇಳಿಕೊಂಡಿದೆಯಲ್ಲದೆ “ಲೀಜನ್ ಬೆಂಬಲಿಸಿ. ಕ್ರಿಮಿನಲುಗಳಿಗೆ ಶಿಕ್ಷೆ ನೀಡಲು  ನಿಮಗೆ ಅಗತ್ಯವಿರುವ ಮಾಹಿತಿಯನ್ನು ತರುತ್ತೇವೆ” ಎಂದು ಟ್ವೀಟ್ ಒಂದರಲ್ಲಿ ಈ ಹಿಂದೆ ಹೇಳಿಕೊಂಡಿತ್ತು.