`ಆಧಾರ್’ ವಿರುದ್ಧ ಮಹಿಳೆ ಕಾನೂನು ಹೋರಾಟ

ಬೆಂಗಳೂರು : ಸಾರ್ವಜನಿಕ ವಿತರಣೆಯ (ಪಿಡಿಎಸ್) ಪಡಿತರ ಪಡೆಯಲು ಆಧಾರ್ ಕಾರ್ಡ್ ನಂಬರ್ ಅವಶ್ಯಕ ಎಂದಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನೀತಿ ವಿರುದ್ಧ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗ್ರಾಮವೊಂದರ ಮಹಿಳೆಯೊಬ್ಬರು ಕಾನೂನು ಹೋರಾಟ ಆರಂಭಿಸಿದ್ದಾರೆ.

ಚನ್ನಪಟ್ಟಣದ ತಗಚಗೆರೆ ಗ್ರಾಮ ನಿವಾಸಿ ಜಿ ಎಸ್ ಸುಕನ್ಯಾ ಎಂಬವರು  ಇಲಾಖೆ ನೀತಿ ವಿರುದ್ಧ ಈ ಹೋರಾಟ ಆರಂಭಿಸಿದ ದಿಟ್ಟ ಮಹಿಳೆ.

ವೃತ್ತಿಯಲ್ಲಿ ಈಕೆ ಟೈಲರ್ ಆಗಿದ್ದಾರೆ. ಪಡಿತರ ಪಡೆಯಲು ಆಧಾರ್ ಕಾರ್ಡ್ ನಂಬರ್ ಕಡ್ಡಾಯಗೊಳಿಸದಂತೆ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಕೋರಿ ಈಕೆ ರಾಜ್ಯ ಹೈಕೋರ್ಟಿಗೆ ಆಕೆ ಮನವಿ ಮಾಡಿಕೊಂಡಿದ್ದಾರೆ.

ಒಂದೊಮ್ಮೆ ಅರ್ಜಿದಾರಳು ಆಧಾರ್ ಕಾರ್ಡ್ ಹಾಜರುಪಡಿಸದಿದ್ದರೂ, ಆಕೆಗೆ ಪಡಿತರ ಸೊತ್ತು ನೀಡಬೇಕೆಂದು ಅಧಿಕಾರಿಗಳಿಗೆ ಹೈಕೋರ್ಟಿನ ಜಸ್ಟಿಸ್ ಬೋಪಣ್ಣ ಮಧ್ಯಂತರ ಆದೇಶ ಹೊರಡಿಸಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು 2016ರ ಆಗಸ್ಟಿನಲ್ಲಿ ಹೊರಡಿಸಿರುವ ಜಾಹೀರಾತೊಂದನ್ನು ಮುಂದಿಟ್ಟುಕೊಂಡು ಸುಕನ್ಯಾ ಕಾನೂನು ಹೋರಾಟಕ್ಕಿಳಿದಿದ್ದಾರೆ. ಆಧಾರ್ ಕಾರ್ಡ್ ಹಾಜರುಪಡಿಸದವರಿಗೆ ಪಡಿತರ ್ತ ನೀಡುವಂತಿಲ್ಲ ಎಂದು ಆ ಜಾಹೀರಾತಿನಲ್ಲಿ ಎಚ್ಚರಿಸಲಾಗಿತ್ತು.

ಸದ್ರಿ ಜಾಹೀರಾತಿಗೆ ತಡೆ ಹೇರಿರುವ ಹೈಕೋರ್ಟು ಇಲಾಖೆಯ ಕಾರ್ಯದರ್ಶಿ, ಆಯುಕ್ತ ಹಾಗೂ ಸ್ಥಳೀಯ ತಹಶೀಲ್ದಾರರಿಗೆ ನೋಟಿಸು ಜಾರಿ ಮಾಡಿದೆ.  ಪಡಿತರ ಪಡೆಯಲು ಮತ್ತು ಇತರ ಲಾಭ ಪಡೆಯಲೋಸುಗ ಆಧಾರ ಕಾರ್ಡ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೇ ಸೂಚಿಸಿತ್ತು. ಆದರೆ ಆಧಾರ್ ವಿಷಯವು ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದಲ್ಲಿ ಈಗಲೂ ನೆನೆಗುದಿಗೆ ಬಿದ್ದಿದೆ ಎಂದು ಸುಕನ್ಯಾ ಪರವಾದಿ ಕ್ಲಿಫ್ಟನ್ ರೊಜಾರಿಯೋ ತಿಳಿಸಿದರು.