ಅಂಬೇಡ್ಕರ್ ವಾದಿಗಳಿಗೆ ಅಸ್ಪೃಶ್ಯರಾದ ಎಡಪಂಥೀಯರು

ಪ್ರಗತಿಪರರು ಎನಿಸಿಕೊಂಡವರು ತಮ್ಮ ಧೋರಣೆಗಳನ್ನು ಸರ್ವಾಧಿಕಾರಿ ನೆಲೆಯಲ್ಲಿ ಜನರ ಮೇಲೆ ಹೇರಲು ಹೊರಟ ಪರಿಣಾಮ ಬಲಪಂಥೀಯರಿಗೆ ಲಾಭವಾಗಿದೆ ಹೊರತು ವಿಚಾರವಾದಕ್ಕಲ್ಲ.

ಮಂಗಳೂರು ನಗರದಲ್ಲಿ `ಅಭಿಮತ’ ಮೂರನೇ ವರ್ಷ ಆಯೋಜಿಸಿದ `ಜನನುಡಿ’ ಸಾಹಿತ್ಯಕ ಚಿಂತನ ಮಂಥನ ಸಮಾವೇಶ ಇದೀಗ ಸೋಶಿಯಲ್ ಮಿಡಿಯಾಗಳಲ್ಲಿ ಅಂಬೇಡ್ಕರ್ ವಾದ ಮತ್ತು ಎಡಪಂಥೀಯರ ಕೋಳಿ ಜಗಳಕ್ಕೆ ಕಾರಣವಾಗಿದೆ.

ಎರಡು ದಿನಗಳ ಕಾಲ ಜಾತಿ, ಮತ, ಪಂಥ, ವಾದಗಳನ್ನು ಮರೆತು ಮಂಗಳೂರಿನ ಚಿಕನ್ ಸುಖ್ಖ, ಫಿಶ್ ಫ್ರೈ ತಿಂದು ಪ್ರೀತಿ-ಕ್ರಾಂತಿಯ ಗೀತೆಗಳಿಗೆ ತಲೆದೂಗಿಸಿದ ಮೇಲೆ ಫೇಸ್ಬುಕ್ ಗೋಡೆಯಲ್ಲಿ ಅಪಸ್ವರ ಕೇಳಿಬರತೊಡಗಿದೆ.

ಆಳ್ವಾಗಳು ನಡೆಸುತ್ತಿದ್ದ ಭೂರ್ಶ್ವಾವಾದಿ ಸಾಹಿತ್ಯ ಜಾತ್ರೆಗಳನ್ನು ಧಿಕ್ಕರಿಸಿ ಆರಂಭವಾದ `ಜನನುಡಿ’ ಆರಂಭಿಕ ವರ್ಷಗಳಲ್ಲಿ ಭಾರತೀಯ ಮಾರ್ಕ್ಸವಾದಿ ಕಮ್ಯೂನಿಸ್ಟ್ ಪಕ್ಷದ ಸಾಂಸ್ಕೃತಿಕ ಶಿಬಿರದಂತೆ ಕಂಡುಬಂದಿರುವುದು ಸುಳ್ಳಲ್ಲ. ಇತ್ತೀಚಿಗಿನ `ಉಡುಪಿ ಚಲೋ’ದಂತಹ ಆಂದೋಲನದ ಹಿನ್ನೆಲೆಯಲ್ಲಿ ಈ ವರ್ಷದ `ಜನನುಡಿ’ಯಲ್ಲಿ ಅಂಬೇಡ್ಕರ್ ಅಭಿಮಾನಿಗಳು ಅಥವಾ ಹರಿದು ಹಂಚಿಹೋಗಿರುವ ದಲಿತ ಸಂಘಟನೆಗಳ ಪ್ರತಿನಿಧಿಗಳು ಹೆಚ್ಚಾಗಿ ಭಾಗವಹಿಸಿದ್ದರು. ಅಷ್ಟು ಮಾತ್ರವಲ್ಲದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮ ವಾರ್ಷಿಕವನ್ನು ಕೂಡ `ಜನನುಡಿ’ ಗುರುತಿಸಿ, ಗೌರವಿಸಿತ್ತು.

ಈ ಬಾರಿಯ `ಜನನುಡಿ’ಯಲ್ಲಿ ಬಲಪಂಥೀಯ ವಾದಿ ವ್ಯವಸ್ಥೆಯಲ್ಲಿ ಶೋಷಿತರಾದ ಮಹಿಳೆಯರು, ದಲಿತರು ಮತ್ತು ಮುಸ್ಲಿಂ ಸಮುದಾಯಗಳ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ತಲ್ಲಣಗಳ ಬಗ್ಗೆ ವಿಚಾರ ವಿಮರ್ಶೆಗಳು ನಡೆದವು. ಮಾತ್ರವಲ್ಲದೆ, ಕರಾವಳಿಯಲ್ಲಿ ಹಿಂದುಳಿದ ವರ್ಗಗಳು ದೇವರೆಂದು ನಂಬುವ ಬಹುತೇಕ ದಲಿತ ವರ್ಗಗಳ ವೀರರು ಬಲಿದಾನದಲ್ಲಿ ದೈವಗಳಾದ ಜಾನಪದ ಪರಂಪರೆಯ ಕುರಿತು ಜನನುಡಿಯಲ್ಲಿ ಚರ್ಚಿತವಾಗಿದೆ.

ಅಂತಿಮವಾಗಿ ಈ ನಾಡಿನ ದೀನದಲಿತರ ಭೂಮಿ ಮತ್ತು ಬದುಕುವ ಹಕ್ಕಿನ ಬಗ್ಗೆ ನಿರ್ಣಯಗಳು ಕೂಡ ಮಂಡನೆಯಾಗಿವೆ. ಜನನುಡಿಯಲ್ಲಿ ಭೂಮಿಯ ವಿಚಾರ, ರೈತಾಪಿ ಕೂಲಿ ಕಾರ್ಮಿಕರ, ಗಿರಿಜನರ ಬಗ್ಗೆ ನಿರ್ಣಯಗಳು ಇದುವರೆಗೆ ಆಗಿರಲಿಲ್ಲ ಎನ್ನಲಾಗಿದೆ. ಅಸ್ಪೃಶ್ಯತೆ ವಿರುದ್ಧ ನಡೆದ ಉಡುಪಿ ಚಲೋ, ಕೊಡಗಿನ ದಿಡ್ಡಳ್ಳಿಯಲ್ಲಿ ಇತ್ತೀಚೆಗೆ ಭೂಮಿಯ ಹಕ್ಕಿನ ಕುರಿತಾಗಿ ನಡೆದಿರುವ ಅನಾಚಾರಗಳು ಈ ವರ್ಷದ ಜನನುಡಿಯ ಮೇಲೆ ಪರಿಣಾಮ ಬೀರಿರುವುದಲ್ಲದೆ ಜನನುಡಿಯ ಉದ್ದೇಶ ಕೂಡ ಹಿಂದಿನ ಕಾಲದ ದಲಿತ ಮತ್ತು ರೈತ ಚಳವಳಿಯ ಅಜೆಂಡಗಳತ್ತ ಸಾಗುತ್ತಿರುವುದು ಸ್ಪಷ್ಟವಾಗಿದೆ.

ಸಾಂಸ್ಕೃತಿಕ ರಾಜಕಾರಣದ ಹಿನ್ನೆಲೆಯಲ್ಲಿ ಇವೆಲ್ಲವನ್ನೂ ಒಳಗೊಳ್ಳುವ ಅವಶ್ಯಕತೆ ಜನಪರವಾದ ಯಾವುದೇ ಆಂದೋಲನಕ್ಕೆ ಇರಬೇಕಾದದು ಇಂದಿನ ಅಗತ್ಯವಾಗಿದೆ.

ಈಗ ಎದ್ದಿರುವ ಸಣ್ಣ ಪ್ರಮಾಣದ ವಿವಾದಕ್ಕೆ ನೂರು ವರ್ಷಗಳ ಇತಿಹಾಸ ಇದೆ. ಭಾರತೀಯ ಎಡಪಂಥೀಯರ ಮೇಲೆ ಬಾಬಾ ಸಾಹೇಬ ಅಂಬೇಡ್ಕರ್ ಅವರಿಗಿದ್ದ ನಿಲುವುಗಳನ್ನು ಈಗಲೂ ದಲಿತರು ಹೊಂದಿರಬೇಕಾಗಿಲ್ಲ. ಅದರರ್ಥ, ಎರಪಂಥೀಯರು ಆ ದೃಷ್ಟಿಯಲ್ಲಿ ಬದಲಾಗಿದ್ದಾರೆ ಎಂದಲ್ಲ. ಇಂದಿನ ರಾಜಕೀಯ, ಧಾರ್ಮಿಕ, ಸಾಮಾಜಿಕ ಸನ್ನಿವೇಶದಲ್ಲಿ ಅಂಬೇಡ್ಕರ್ ವಾದಿಗಳ ಮತ್ತು ವಾಮಪಂಥೀಯರ ಸಮಾನ ವೈರಿ ಯಾರು ಎಂಬುದನ್ನು ಸ್ಪಷ್ಟಪಡಿಸುವ ಅನಿವಾರ್ಯತೆ ಇದೆ.

ದೇಶದಾದ್ಯಂತ ದೇವರು, ಧರ್ಮದ ಹೆಸರಿನಲ್ಲಿ ಬಲಂಪಥೀಯ ರಾಜಕೀಯ ಧ್ರುವೀಕರಣ ನಡೆದಿರುವುದು ದೇಶಕ್ಕೆ ಅಪಾಯಕಾರಿ ಎಂದು ಸ್ವಘೋಷಿತ ಪ್ರಗತಿಪರರು, ದಲಿತರು ಮತ್ತು ಹಿಂದೊಮ್ಮೆ ದಲಿತರನ್ನು ದೂರ ಇರಿಸಿದ್ದರು ಎನ್ನಲಾದ ಕಮ್ಯೂನಿಷ್ಟರು ಅರಿತಿದ್ದಾರೆ. ಆದರೆ, ಪ್ರಗತಿಪರರು ಎನಿಸಿಕೊಂಡವರು ತಮ್ಮ ಧೋರಣೆಗಳನ್ನು ಸರ್ವಾಧಿಕಾರಿ ನೆಲೆಯಲ್ಲಿ ಜನರ ಮೇಲೆ ಹೇರಲು ಹೊರಟ ಪರಿಣಾಮ ಬಲಪಂಥೀಯರಿಗೆ ಲಾಭವಾಗಿದೆ ಹೊರತು ವಿಚಾರವಾದಕ್ಕಲ್ಲ.

ಹಿಂದುಳಿದ ಮತ್ತು ದಲಿತ ಸಮುದಾಯವರು ಪೂಜಿಸುವ ಜಾನಪದ ದೇವರ ಬಗ್ಗೆ ಕೂಡ ಪ್ರಗತಿಪರರ ಧೋರಣೆ ಬದಲಾಗುವ ಅಗತ್ಯ ಇದೆ. ಬ್ರಾಹ್ಮಣರು ಅಸ್ಪೃಶ್ಯತೆ ಬಿಟ್ಟು ಬಂದಿರುವುದಲ್ಲದೆ ಈಗ ದೇವರೇ ಅಲ್ಲದ ದೈವಗಳ ಅರ್ಚಕರಾಗುತ್ತಿರುವ ಮೂಲಕ ಪುರೋಹಿತಶಾಹಿಯನ್ನು ಮತ್ತೊಂದು ವಿಧವಾಗಿ ವಿಸ್ತರಿಸಲು ಹೊರಟಾಗ ಸಮಾಜವನ್ನು ಎಚ್ಚರಿಸಬೇಕಾದವರು ಯಾರು ಎಂಬ ಪ್ರಶ್ನೆಗಳ ಪ್ರಗತಿಪರರಲ್ಲಿ ಉತ್ತರವಿಲ್ಲ.

ಒಂದೆಡೆ ಕೋಮು ಸೌಹಾರ್ದ ವೇದಿಕೆ, ಇನ್ನೊಂದೆಡೆ ಅಭಿಮತದಂತಹ ತಂಡಗಳು, ಮಗದೊಂದೆಡೆ ಹಲವು ಗುಂಪುಗಳಾಗಿರುವ ದಲಿತ ಸಮಿತಿಗಳು, ಮತ್ತಿತರ ಸಮಾನ ಮನಸ್ಕ ವೇದಿಕೆಗಳು ತಮ್ಮ ಸಮಾನ ವೈರಿಯ ವಿರುದ್ಧ ಎಲ್ಲ ಮಡಿವಂತಿಕೆಗಳನ್ನು ಬಿಟ್ಟು ಹೋರಾಡಲು ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವ ಬದಲು ಫೇಸ್ಬುಕ್ ಗೋಡೆಗಳಲ್ಲಿ ಕೆತ್ತುವುದರಿಂದ ಹೆಚ್ಚೇನೂ ಫಲ ದೊರೆಯದು.