ಸಹಕಾರಿ ರಂಗದ ರಕ್ಷಣೆಗೆ ಎಡರಂಗ ಕಾಲ್ನಡಿಗೆ ಜಾಥಾ

ಪ್ರಚಾರ ಜಾಥಾ ಹೊರಟ ಕಾರ್ಯಕರ್ತರು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸಹಕಾರಿ ರಂಗವನ್ನು ರಕ್ಷಿಸಬೇಕು, ಕೇಂದ್ರ ಸರಕಾರದ ಅಪನಗದೀಕರಣದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಗೆ ಸರಿಯಾದ ಮಾರ್ಗೋಪಾಯವನ್ನು ಹುಡುಕಬೇಕು ಎಂಬ ನಿಟ್ಟಿನಲ್ಲಿ ಎಡರಂಗದ ಪ್ರಚಾರ ಜಾಥಾ ಬಾಯಾರು ಪದವಿನಲ್ಲಿ ನಡೆಯಿತು. ಡಿ 29ರಂದು ನಡೆಯಲಿರುವ ಕಾಸರಗೋಡಿನಿಂದ ತಿರುವನಂತಪುರದವರೆಗಿನ ಎಡರಂಗ ಬೃಹತ್ ಮಾನವ ಸರಪಳಿ ರಚನೆಯ ಪೂರ್ವಭಾವಿಯಾಗಿ ಕಾಲ್ನಡಿಗೆ ಪ್ರಚಾರ ಜಾಥಾವು ಸುಬ್ಬಯ್ಯಕಟ್ಟೆಯಿಂದ ಆರಂಭವಾಗಿ ಬಾಯಾರುಪದವು ಮುಳಿಗದ್ದೆಯಲ್ಲಿ ಸಮಾಪ್ತಿಯಾಯಿತು.

ಪ್ರಚಾರ ಜಾಥಾದ ಮುಂಚೂಣಿ ನಾಯಕರಾಗಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಕೆ ಆರ್ ಜಯಾನಂದ ಭಾಗವಹಿಸಿ ಮಾತನಾಡಿದರು. ಕೇರಳ ರಾಜ್ಯ ಜನತೆಯ ನಾಡಿ ಮಿಡಿತದಂತಿರುವ ಸಹಕಾರಿ ರಂಗದ ರಕ್ಷಣೆಗೆ ಎಡರಂಗ ಸದಾ ಬದ್ಧ, ಕೇಂದ್ರ ಸರಕಾರವು ಕಳ್ಳ-ಧನವೆನ್ನುವ ನೆಪದಲ್ಲಿ ಇಂತಹ ಸಹಕಾರಿ ರಂಗವನ್ನು ಬುಡಮೇಲುಗೊಳಿಸುವ ಯತ್ನಕ್ಕೆ ಕೈ ಹಾಕಿದೆ. ಕೃಷಿಕರು, ಸಾಮಾನ್ಯರ ಅಭ್ಯುದಯಕ್ಕೆ ನಾಂದಿ ಹಾಡಿದ ಸಹಕಾರಿ ರಂಗವನ್ನು ಯಾರಿಂದಲೂ ಅಲುಗಾಡಿಸಲಾಗದು ಎಂದರು.

ಕಾಸರಗೋಡು ಸಹಿತ ವಿವಿಧ ಜಿಲ್ಲೆಗಳಲ್ಲಿರುವ ಸಹಕಾರಿ ಬ್ಯಾಂಕುಗಳ ಬೆಳವಣಿಗೆಗೆ ಹಲವು ರಾಜಕೀಯ ಪಕ್ಷಗಳು ತಮ್ಮದೇ ಆದ ಕೊಡುಗೆ ನೀಡಿವೆ. ರಾಜ್ಯದಲ್ಲಿ ಶೇ 70ರಷ್ಟು ಆರ್ಥಿಕ ವ್ಯವಹಾರಗಳು ಸಹಕಾರಿ ಬ್ಯಾಂಕುಗಳ ಮೂಲಕವೇ ನಡೆಯುತ್ತಿವೆ. ಸಹಕಾರಿ ರಂಗವು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆಗಳನ್ನು ನೀಡಿದ್ದು, ಇಂತಹ ಸದೃಢ ವಲಯವನ್ನು ಬುಡಮೇಲುಗೊಳಿಸುವ ಕೃತ್ಯಕ್ಕೆ ಕೈ ಹಾಕಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ದ್ರೋಹ ಎಂದರು.